ಕೊರಟಗೆರೆ:- ಗೃಹಜ್ಯೋತಿ ಯೋಜನೆಯಡಿ ಅನಧಿಕೃತವಾಗಿ ಸೌಲಭ್ಯ ಪಡೆಯುತ್ತಿರುವವರನ್ನು ಪತ್ತೆಹಚ್ಚುವ ಉದ್ದೇಶದಿಂದ ಬೆಸ್ಕಾಂ ಅಧಿಕಾರಿಗಳು ಮಂಗಳವಾರದಿಂದ ಒಂದು ತಿಂಗಳ ಕಾಲ ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಆರಂಭಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನಲ್ಲಿ ಗೃಹಜ್ಯೋತಿ ಯೋಜನೆಯಡಿ ಸುಮಾರು 47,702 ಫಲಾನುಭವಿಗಳು ಇದ್ದು, ಪ್ರತಿ ತಿಂಗಳು ಸರ್ಕಾರವು ₹2 ಕೋಟಿಗೂ ಅಧಿಕ ವಿದ್ಯುತ್ ಶುಲ್ಕವನ್ನು ಭರಿಸುತ್ತಿದೆ. ಯೋಜನೆಯ ನೈಜ ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲನೆ ವೇಳೆ ಫಲಾನುಭವಿಗಳು ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ, ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದ ಪತ್ರ ಹಾಗೂ ತೆರಿಗೆ ಪಾವತಿದಾರರಾಗಿದ್ದರೆ ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅಧಿಕಾರಿಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಈ ತಿಂಗಳ ಬಿಲ್ ಕುರಿತು ಸ್ಪಷ್ಟನೆ
ಪರಿಶೀಲನಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಈ ತಿಂಗಳ ವಿದ್ಯುತ್ ಬಿಲ್ನಲ್ಲಿ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ವಿವರ ನೀಡಲಾಗುತ್ತದೆ. ಬಿಲ್ ಅನ್ನು ಆನ್ಲೈನ್ ಅಥವಾ ಬೆಸ್ಕಾಂ ಕಚೇರಿಯ ನಗದು ಕೌಂಟರ್ನಲ್ಲಿ ಪಾವತಿಸಬಹುದಾಗಿದೆ.

ಈ ಕುರಿತು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪ್ರಸನ್ನ ಕುಮಾರ್ ವಿ. ತಿಳಿಸಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
