ಕೊರಟಗೆರೆ:- ತಾಲೂಕಿನ ಗ್ರಾಮೀಣ ಜನರ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಕ್ಕಿರಾಪುರ ಗ್ರಾಮದಲ್ಲಿ ಶೌರ್ಯ ಕ್ಲಿನಿಕ್ ಹಾಗೂ ಶೌರ್ಯ ಔಷಧಾಲಯ ನೂತನವಾಗಿ ಆರಂಭಗೊಂಡಿದ್ದು, ಬುಧವಾರದಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ಗೋರಿಬಾಬಾ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಈ ಕ್ಲಿನಿಕ್ನಲ್ಲಿ ನಾಲ್ವರು ಅನುಭವಿ ವೈದ್ಯರ ತಂಡ ಸೇವೆ ಸಲ್ಲಿಸಲಿದ್ದು, ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ವೈದ್ಯಕೀಯ ತಪಾಸಣೆ ಹಾಗೂ ಅಗತ್ಯ ಔಷಧಿಗಳು ಲಭ್ಯವಿರಲಿವೆ.
ಗ್ರಾಮೀಣ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪ್ರಾಥಮಿಕ ಚಿಕಿತ್ಸೆ, ಆರೋಗ್ಯ ತಪಾಸಣೆ ಹಾಗೂ ಔಷಧಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕ್ಲಿನಿಕ್ ಕಾರ್ಯಾರಂಭ ಮಾಡಿದೆ. ವಿಶೇಷವಾಗಿ ಅಕ್ಕಿರಾಪುರ ಸೇರಿದಂತೆ ಸುತ್ತಮುತ್ತಲಿನ ಸುಮಾರು 8 ರಿಂದ 9 ಗ್ರಾಮಗಳ ಜನರಿಗೆ ಈ ಆರೋಗ್ಯ ಕೇಂದ್ರವು ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಕ್ಲಿನಿಕ್ನಲ್ಲಿ ಹಿರಿಯ ವೈದ್ಯರಾದ ಡಾ. ಅನಿಲ್, ಡಾ. ಶರತ್, ಡಾ. ರಾಘವೇಂದ್ರ ಹಾಗೂ ಡಾ. ಶ್ರೀಧರ್ ಸೇವೆ ಸಲ್ಲಿಸಲಿದ್ದು, ವ್ಯವಸ್ಥಾಪಕಿ ವೀಣಾ ಅವರು ಸಾರ್ವಜನಿಕರು ಈ ಆರೋಗ್ಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡಿರುವ ಶೌರ್ಯ ಕ್ಲಿನಿಕ್ಗೆ ಸ್ಥಳೀಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಹನುಮಾನ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಧುಕರ್, ವೈದ್ಯರು, ಕ್ಲಿನಿಕ್ ವ್ಯವಸ್ಥಾಪಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.
