ಕೆ.ಆರ್.ಪೇಟೆ: ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಸಂಸ್ಥೆಯ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ಎಸ್.ಐ.ಆರ್. ಕುರಿತು, ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಪ್ರತಿನಿಧಿಗಳಿಗೆ (ಬಿ.ಎಲ್.ಎ-೨) ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಜಿಲ್ಲಾ ಕಾಂಗ್ರೆಸ್ ಎಸ್.ಐ.ಆರ್. ಉಸ್ತುವಾರಿಗಳಾದ ಮಾಜಿ ಶಾಸಕ ಕೊಳ್ಳೇಗಾಲ ನಂಜುಂಡಸ್ವಾಮಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮಾಜಿ ಶಾಸಕ ಕೊಳ್ಳೇಗಾಲ ನಂಜುಂಡಸ್ವಾಮಿ ಅವರು ಎಸ್.ಐ.ಆರ್ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಿದೆ. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ನೋಡಕೊಳ್ಳಬೇಕಾದುದು ನಮ್ಮ ಪಕ್ಷದ ಬೂತ್ ಮಟ್ಟದ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಚುನಾವಣಾ ಆಯೋಗವು ನೇಮಕ ಮಾಡಿರುವ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಪ್ರತಿ ಮತದಾರರಿಗೆ ೨ ಎನ್ಯುಮರೇಷನ್ ಫಾರಂಗಳನ್ನು ನೀಡಬೇಕು ನಂತರ ಒಂದು ಫಾರಂ ಅನ್ನು ಮತದಾರರಿಗೆ ನೀಡಿ ಮತ್ತೊಂದು ಫಾರಂ ಅನ್ನು ಸರಿಯಾಗಿ ಭರ್ತಿ ಮಾಡಿ ಆಧಾರ್ ನಂಬರ್, ಮೊಬೈಲ್ ನಂಬರ್, ಹಾಗೂ ಪಾಸ್ಪೋಟೋ ಸೈಜಿನ ಪೋಟೋ ಅನ್ನು ಪಡೆದು ಸ್ಕ್ಯಾನ್ ಮಾಡಿಕೊಳ್ಳಬೇಕು. ನಂತರ ಮತ್ತೊಂದು ಭರ್ತಿ ಮಾಡಿದ ಫಾರಂಗೆ ಸಹಿ ಮಾಡಿ ಮತದಾರರಿಗೆ ನೀಡಬೇಕು. ಹೀಗೆ ಮಾಡುವುದು ಬಿ.ಎಲ್.ಓ ಅಧಿಕಾರಿಗಳ ಕರ್ತವ್ಯ ಜೊತೆಗೆ ಇದನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆಯೇ ಎಂಬುದನ್ನು ನೋಡಿಕೊಳ್ಳುವುದು.

ಎನ್ಯುಮರೇಷನ್ ಫಾರಂ ಅನ್ನು ಮನೆ ಮನೆಗೆ ತಲುಪಿಸದೇ ಇದ್ದರೆ ಅಂತಹ ಮತದಾರರ ಮನೆಯ ವಿಳಾಸವನ್ನು ಬಿ.ಎಲ್.ಓ ಅಧಿಕಾರಿಗಳಿಗೆ ತೋರಿಸಿ ಮತದಾರರು ಅನ್ಯುಮರೇಷನ್ ಫಾರಂ ಅನ್ನು ಭರ್ತಿ ಮಾಡಿಸಬೇಕು. ಅಧಿಕಾರಿಗಳು ವಿಳಾಸ ಗೊತ್ತಿಲ್ಲದೇ ಕೈಬಿಟ್ಟ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಅವರ ಹೆಸರು ಕೈಬಿಟ್ಟು ಹೋಗದಂತೆ ಎನ್ಯುಮರೇಷನ್ ಫಾರಂ ಭರ್ತಿ ಮಾಡಿಸುವ ಮೂಲಕ ನಮ್ಮ ಮತದಾರರನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ನಮ್ಮ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ-೨ ಅವರು ಪ್ರಾಮಾಣಿಕವಾಗಿ ನಿರ್ವಹಣೆ ಮಾಡಬೇಕು. ಹೀಗೆ ಮತದಾರರಿಗೆ ಎನ್ಯುಮರೇಷನ್ ಫಾರಂ ಭರ್ತಿ ಮಾಡಿಸಲು ಸಹಕಾರ ನೀಡುವುದರಿಂದ ಆ ಮತದಾರರು ಚುನಾವಣೆ ಸಮಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ, ಬಿ.ಎಲ್.ಎ-೨ ಹೇಳಿದವರಿಗೆ ಮತ ನೀಡುವುದು ಖಚಿತ ಎಂದು ನಂಜುಂಡಸ್ವಾಮಿ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಬಿ.ನಾಗೇಂದ್ರಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ವಿಧಾನ ಪರಿಷತ್ ಶಾಸಕ ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಯುಐಡಿಎಫ್ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಸದಸ್ಯರಾದ ಶಿವಮ್ಮ, ರೂಪಾ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಕೆ.ರುಕ್ಮಾಂಗದ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಬ್ಯಾಕ್ ಕಾಂಗ್ರೆಸ್ ಎಸ್.ಸಿ.ಎಸ್.ಟಿ ವಿಭಾಗದ ಅಧ್ಯಕ್ಷ ರಾಜಯ್ಯ, ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಬಸ್ತಿ ರಂಗಪ್ಪ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಅಜ್ಮತ್ ಉಲ್ಲಾ ಷರೀಪ್, ನವೀದ್, ಆಯಾಜ್, ಸಯ್ಯದ್ ಜಮೀಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮೀನಾಕ್ಷಿ, ನೇತ್ರಾವತಿ ರಮೇಶ್, ರೋಜಾ.ಬಿ.ವಿ, ರೂಪಾ, ಇಂದ್ರ, ವಿದ್ಯಾ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
