ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅವರ ಅಭಿಮಾನಿಗಳ ಬಳಗದ ವತಿಯಿಂದ ಜುಲೈ 26ರಂದು (ಭಾನುವಾರ) 2026–27ನೇ ಸಾಲಿನ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಭಿಮಾನಿಗಳ ಬಳಗದ ಅಧ್ಯಕ್ಷ ರಮೇಶ್ ವಾಟಳ್ ತಿಳಿಸಿದ್ದಾರೆ.

ಅನಕೃ ಅವರ ಜನ್ಮಸ್ಥಳದಲ್ಲಿ 2014–15ನೇ ಸಾಲಿನಿಂದ ಪ್ರತಿವರ್ಷ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈವರೆಗೆ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ, ಡಾ. ಹೆಚ್.ಎಸ್. ವೆಂಕಟೇಶಮೂರ್ತಿ, ಪ್ರೊ. ದೊಡ್ಡರಂಗೇಗೌಡ, ಮಾಸ್ಟರ್ ಹಿರಣ್ಣಯ್ಯ, ಪ್ರೊ. ಜಿ. ಅಶ್ವತ್ಥನಾರಾಯಣ, ಪ್ರೊ. ಬಿ.ಎಸ್. ಕೇಶವರಾವ್, ಬಿ.ಯು. ಗೀತಾ, ಡಾ. ಎಸ್.ಎಸ್. ಮಧುಕೇಶ್ವರ್, ಪ್ರೊ. ಎಂ. ಕೃಷ್ಣೇಗೌಡ, ಶಾ.ಮಂ. ಕೃಷ್ಣರಾಯ ಹಾಗೂ ಡಾ. ಹಂಪ ನಾಗರಾಜಯ್ಯ ಸೇರಿದಂತೆ ಹಲವು ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಾಲಿನ ಅನಕೃ ಪ್ರಶಸ್ತಿಗೆ ಹಿರಿಯ ಸಾಹಿತಿ, ವಿಮರ್ಶಕ ಹಾಗೂ ಸಂಶೋಧಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪರಿಚಯ
1953ರ ಸೆಪ್ಟೆಂಬರ್ 5ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನರಹಳ್ಳಿ ಗ್ರಾಮದಲ್ಲಿ ರಾಜಲಕ್ಷ್ಮಮ್ಮ ಹಾಗೂ ಶಿವರಾಮಯ್ಯ ದಂಪತಿಯ ಪುತ್ರರಾಗಿ ಜನಿಸಿದ ಡಾ. ಬಾಲಸುಬ್ರಹ್ಮಣ್ಯ ಅವರು ನರಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಸುಂಕಾತೊಣ್ಣೂರಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. 1973ರಲ್ಲಿ ನಾಗಮಂಗಲದಲ್ಲಿ ಬಿ.ಎ. (ಆನರ್ಸ್) ಹಾಗೂ 1977ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ್ಯಾಂಕ್ ಪಡೆದರು. ವಿದ್ಯಾರ್ಥಿ ದಶೆಯಲ್ಲಿಯೇ ರಾಜ್ಯ ಪ್ರಶಸ್ತಿ ಹಾಗೂ ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನವನ್ನು ಪಡೆದಿದ್ದರು.
1992ರಲ್ಲಿ “ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್. ನರಸಿಂಹಸ್ವಾಮಿ ಕಾವ್ಯ – ಒಂದು ಅಧ್ಯಯನ” ವಿಷಯದ ಕುರಿತು ಮಹಾಪ್ರಬಂಧ ಸಲ್ಲಿಸಿ ಪಿಎಚ್.ಡಿ. ಪದವಿ ಪಡೆದರು.
ಅವರು ಅಧ್ಯಾಪಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅನುಸಂಧಾನ, ನವ್ಯತೆ, ಸಾಹಿತ್ಯ ಸಂಸ್ಕೃತಿ, ಕುವೆಂಪು ನಾಟಕಗಳ ಅಧ್ಯಯನ, ಕುವೆಂಪು ಕಾವ್ಯ, ಅನಕೃ ಮತ್ತು ಕನ್ನಡ ಸಂಸ್ಕೃತಿ, ನೆಲ ಸಂಸ್ಕೃತಿ, ಸಂಸ್ಕೃತಿ ಪಥ, ಹಣತೆಯ ಹಾಡು, ಕೆ.ಎಸ್. ನರಸಿಂಹಸ್ವಾಮಿ – ಕವಿ ಮತ್ತು ಕಾವ್ಯ, ಕುವೆಂಪು ದರ್ಶನ ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ, ಅಂತರಂಗದ ಮೃದಂಗ, ಜೀವದಾಯಿನಿ, ನಾನು ಪಯಣಿಗ, ನಾನು ಕನಸಿಗ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಪು.ತಿ.ನ. ಪುರಸ್ಕಾರ ಸಮಿತಿ ಸದಸ್ಯ, ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿ ಸದಸ್ಯ, ವಿ.ಕೃ. ಗೋಕಾಕ್ ಟ್ರಸ್ಟ್ ಸದಸ್ಯ ಹಾಗೂ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಅವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಗೆ ವಿ.ಎಂ. ಇನಾಂದಾರ್ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಆದರ್ಶ ಸಾಹಿತ್ಯರತ್ನ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಜೀವನ್ಮುಖಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ವಿಮರ್ಶಕ, ಸಂಶೋಧಕ ಹಾಗೂ ಸಾಹಿತ್ಯ ಚಿಂತಕರಾಗಿ ವಿಶಿಷ್ಟ ಗುರುತಿಸಿಕೊಂಡಿರುವ ಅವರು ಅಮೆರಿಕ, ಈಜಿಪ್ಟ್, ಸಿಂಗಪುರ, ವಿಯೆಟ್ನಾಂ, ಕಾಂಬೋಡಿಯಾ, ಥಾಯ್ಲೆಂಡ್ ಸೇರಿದಂತೆ ಯೂರೋಪಿನ ಹಲವು ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹರಡಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಜುಲೈ 26ರಂದು ಅರಕಲಗೂಡಿನ ಶಿಕ್ಷಕರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ 2026–27ನೇ ಸಾಲಿನ ಅನಕೃ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
