ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಂಗಳೂರಿನ ಶ್ರೀ ಬಸವೇಶ್ವರ ಸುಜ್ಲಾನ ಕಲ್ಯಾಣ ಮಂಟಪದಲ್ಲಿ ಜುಲೈ 7 ಮತ್ತು 8ರಂದು ಎರಡು ದಿನಗಳ ಕಾಲ ನಡೆದ 14ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನೆರವೇರಿತು ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಾವಿರಾರು ಶಿವಶರಣರು, ವಚನ ಸಾಹಿತ್ಯಾಸಕ್ತರು ಹಾಗೂ ಭಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಶರಣ ಸಾಹಿತ್ಯದ ವೈಭವವನ್ನು ಸ್ಮರಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ 98ನೇ ವಯಸ್ಸಿನ ಹಿರಿಯ ಸಾಹಿತಿ, ನಾಡೋಜ ಗೊ.ರು. ಚೆನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸಿ ನೀಡಿದ ಭಾಷಣ ಶರಣ ತತ್ವ, ಸಾಮಾಜಿಕ ಮೌಲ್ಯಗಳು ಹಾಗೂ ಯುವಜನತೆಯ ಜವಾಬ್ದಾರಿಗಳ ಕುರಿತು ಚಿಂತನೆಗೆ ಹಚ್ಚುವಂತಿತ್ತು.

ಧ್ವಜಾರೋಹಣ, ಸರ್ವಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ ಹಾಗೂ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಗೋಷ್ಠಿಗಳು ಜನಮನ ಸೆಳೆದವು. ಶ್ರೀಕ್ಷೇತ್ರ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಸಮ್ಮೇಳನದಲ್ಲಿ ಚಿಂತಕರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕೆ. ಮರುಳಸಿದ್ದಪ್ಪ, ಡಾ. ಎಂ.ಎಸ್. ಆಶಾದೇವಿ, ಹೇಮಾ ಪಟ್ಟಣಶೆಟ್ಟಿ ಸೇರಿದಂತೆ ಹಲವರು ವಿಚಾರ ಮಂಡಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿಕ್ಷಣ ತಜ್ಞ ಡಾ. ಪ್ರಭಾಕರ ಕೋರೆ ಸೇರಿದಂತೆ ಹಲವು ಗಣ್ಯರು ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯದ ಮಹತ್ವವನ್ನು ಪ್ರತಿಪಾದಿಸಿದರು.

ಸಮ್ಮೇಳನದ ಯಶಸ್ಸಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಹಾಗೂ ಬೆಂಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರ ಸಂಘಟನಾ ಶ್ರಮ ಪ್ರಮುಖ ಕಾರಣವಾಗಿದ್ದು, ಸಾವಿರಾರು ಜನರಿಗೆ ಉತ್ತಮ ವಸತಿ, ಪ್ರಸಾದ ಹಾಗೂ ವ್ಯವಸ್ಥೆ ಕಲ್ಪಿಸಿ ಮಾದರಿ ಸಮ್ಮೇಳನವಾಗಿ ರೂಪಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಶರಣ ಸಾಹಿತ್ಯದ ವಾತಾವರಣ ನಿರ್ಮಿಸಿ, ವಚನ ಸಂಸ್ಕೃತಿಯ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಭಾಗವಹಿಸಿದ ಶರಣ ಬಂಧುಗಳಿಗೆ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಹಾಗೂ ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ತೀರ್ಥಕುಮಾರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ಎಂ.ಎನ್.
