ತುಮಕೂರು: ನಿರ್ಗತಿಕರಿಗೆ ನೆರವು, ಅಸಹಾಯಕರಿಗೆ ಸಹಾಯ, ಮತ್ತಿತರ ಸೇವಾಕಾರ್ಯಗಳೊಂದಿಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು, ಅಭಿಮಾನಿಗಳು ಆಚರಿಸಿದರು.
ಇದರ ಅಂಗವಾಗಿ ಇಕ್ಬಾಲ್ ಅಹಮದ್ ಅವರ ಬೆಂಬಲಿಗರು ಬೀದಿಬದಿಯ ನಿರ್ಗತಿಕರಿಗೆ ಚಳಿ, ಮಳೆ ರಕ್ಷಣೆಗಾಗಿ ಹೊದಿಕೆ, ಮತ್ತಿತರ ಸಾಮಗ್ರಿ ವಿತರಿಸಿದರು. ಶಿರಾ ಗೇಟ್ನ ಅನಾಥಾಶ್ರಮದ ಅನಾಥರಿಗೆ ಬೆಡ್ಶೀಟ್ ವಿತರಣೆ ಮಾಡಿ ನೆರವಾದರು. ಅಲ್ಲದೆ, ನಾಲ್ಕು ಅಸಹಾಯಕ ಕುಟುಂಬದವರು ಬದುಕು ರೂಪಿಸಿಕೊಳ್ಳಲು ಅವರಿಗೆ ತಲಾ ಒಂದೊಂದು ತಳ್ಳುವ ಗಾಡಿ ಹಾಗೂ ಗಾಡಿಯಲ್ಲಿ ವ್ಯಾಪಾರ ಮಾಡಲು ಹಣ್ಣು ಹಾಗೂ ತರಕಾರಿ ಸರಕು ಕೊಟ್ಟು ಸಹಾಯ ಮಾಡಿದರು.
ಇದಕ್ಕೂ ಮೊದಲು ನಗರದ ಜಿಲ್ಲಾ ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಹಾಯಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿ ಕಾಂಗ್ರೆಸ್ ನಾಯಕ ಇಕ್ಬಾಲ್ ಅಹಮದ್ ಅವರ ಜನ್ಮದಿನವನ್ನು ಸೇವಾಕಾರ್ಯವಾಗಿ ಸಾರ್ಥಕವಾಗಿ ಆಚರಿಸಿದರು.
ಇದಲ್ಲದೆ, ಛತ್ತೀಸ್ಗಡ ಮೂಲದ ಕುಟುಂಬ ಜಿಲ್ಲೆಯ ತೋಟದ ಕೂಲಿ ಕೆಲಸಕ್ಕೆ ಬಂದಿತ್ತು. ಕುಟುಂಬದ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಈ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರನ್ನು ಛತ್ತೀಘಡಕ್ಕೆ ಕಳುಹಿಸಲು ಇಕ್ಬಾಲ್ ಅಹಮದ್ ಹಾಗೂ ಅವರ ಬೆಂಬಲಿಗರು ಆಂಬುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದಾರೆ. ಅವರನ್ನು ಸುರಕ್ಷಿತವಾಗಿ ಆವರ ಊರು ತಲುಪಿಸುವ ಹೊಣೆ ಹೊತ್ತಿದ್ದಾರೆ.
ಇಕ್ಬಾಲ್ ಅಹಮದ್ ಅವರ ಹುಟ್ಟುಹಬ್ಬ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ಕಾರ್ಯಗಳಲ್ಲಿ ಅಸ್ಲಾಂ ಪಾಷಾ, ಸೈಯದ್ ನಯಾಜ್ ಅಹ್ಮದ್, ಎನ್.ಮಹೇಶ್, ರೇವಣಸಿದ್ಧಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಫಯಾಜ್, ಧನಿಯಾ ಕುಮಾರ್, ಪಿ.ಎನ್.ರಾಮಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶ್ರೀಮತಿಸುಜಾತ, ನಟರಾಜಶೆಟ್ಟಿ, ಚಕ್ರವರ್ತಿಪ್ರಕಾಶ್, ಅಕ್ರಮುಲ್ಲಾಖಾನ್, ಹಿಂದೂಸ್ತಾನ್ ಫಯಾಜ್, ಪೊಲೀಸ್ಮುನ್ನಾ, ಇಟ್ಟಿಗೆಸಿದ್ದಪ್ಪ, ಇಸ್ಲಾಂಖಾನ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
