ತುಮಕೂರು: ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ನ 75 ವರ್ಷಾಚರಣೆ ಅಂಗವಾಗಿ ಈ ತಿಂಗಳ 27ರಿಂದ ಆರು ದಿನಗಳ ಕಾಲ ನಗರದಲ್ಲಿಯೋ ನೆಕ್ಸ್-ಸನ್ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಪಂದ್ಯಾವಳಿ ಏರ್ಪಾಟಾಗಿದೆ. ರಾಜ್ಯಾದ್ಯಂತ ಸುಮಾರು 600 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ್ಮಿಂಟನ್ನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.ರಾಜ್ಯದ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮುಂಬರುವ ಒಲಂಪಿಕ್ ಗುರಿ ಇಟ್ಟುಕೊಂಡು ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಗುರುತಿಸಲು, ಸಿದ್ಧಪಡಿಸಲು ಈ ಟೂರ್ನಮೆಂಟ್ ಉತ್ತಮ ವೇದಿಕೆ ಆಗಲಿದೆ.ಆರು ಅಂಕಣಗಳಲ್ಲಿ ಆರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.ಆಗಸ್ಟ್ 1ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
27ರಂದು ಉದ್ಘಾಟನಾ ಸಮಾರಂಭವಿದ್ದು ಅಂದು ಬೆಳಿಗ್ಗೆ 10.45ಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಯೋನೆಕ್ಸ್-ಸನ್ರೈಸ್ರಾಜ್ಯ ಬ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತುಅಂಡರ್-13 ಪಂದ್ಯಾವಳಿ ಉದ್ಘಾಟಿಸುವರು.ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅಧ್ಯಕ್ಷತೆ ವಹಿಸಿವರು, ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಹೆಸರಾಂತ ಕ್ರೀಡಾಪಟುಗಳು ಅತಿಥಿಗಳಾಗಿ ಭಾಗವಹಿಸುವರುಎಂದುಕುಮಾರ್ ಬಂಗಾರಪ್ಪ ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ರಾಜ್ಯಮಟ್ಟದ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿ ತುಮಕೂರು ನಗರದಲ್ಲಿ ನಡೆಯುತ್ತಿರುವುದು ಅಭಿಮಾನದ ವಿಚಾರ.ನಗರದ ಎಲ್ಲಾ ಕ್ರೀಡಾಪಟುಗಳು ಬೆಂಬಲ ನೀಡಿ ಸಹಕರಿಸಬೇಕು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ.ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ.ಮುರಳಿಧರ್, ಸದಸ್ಯರಾದ ಸುಧೀರ್, ಹರೀಶ್ಕುಮಾರ್, ಅಜಯ್ಕುಮಾರ್, ಅಧ್ಯಕ್ಷ ಎಂ.ನಾಗರಾಜು, ಜಂಟಿ ಕಾರ್ಯದರ್ಶಿ ಊರುಕೆರೆ ಪುರುಷೋತ್ತಮ್, ಎ.ಎನ್. ಪ್ರಭಾಕರ್ ಮೊದಲಾದವರು ಭಾಗವಹಿಸಿದ್ದರು.
