ಹಾಸನ: ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಮತ್ತು ರಾಜಕೇಂದ್ರಿತವಾಗಿತ್ತು. ಅದನ್ನು ಮೊಟ್ಟಮೊದಲು ಮುರಿದು, ತಮ್ಮ ಮನೆಯನ್ನೇ ಜ್ಞಾನಕೇಂದ್ರವನ್ನಾಗಿ ರೂಪಿಸಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಕುಶಾಲ್ ಬರಗೂರು ಹೇಳಿದರು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ‘ಮನೆಗೊಂದು ಗ್ರಂಥಾಲಯ’ ಜಿಲ್ಲಾ ಜಾಗೃತ ಸಮಿತಿ, ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಬಿ.ಡಿ. ಕುಮಾರ್ ಅವರ ಬಾಗೇಶಪುರದ ಗುಡ್ಡದಮನೆ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರದಲ್ಲಿದ್ದ ಗ್ರಂಥಾಲಯದ ಪರಿಕಲ್ಪನೆಯನ್ನು ಮನೆಯೊಳಗೆ ತಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ನಿವಾಸವನ್ನೇ ‘ರಾಜಗೃಹ’ ಎಂಬ ಜ್ಞಾನಕೇಂದ್ರವನ್ನಾಗಿ ರೂಪಿಸಿದ್ದರು. ಅದೇ ಮಾದರಿಯಲ್ಲಿ ಡಾ. ಬಿ.ಡಿ. ಕುಮಾರ್ ಅವರು ತಮ್ಮ ಹಳ್ಳಿಯ ಮನೆಯನ್ನೇ ಸಾಹಿತ್ಯ ಚರ್ಚೆ, ಅಧ್ಯಯನ ಮತ್ತು ಸಂಶೋಧನೆಯ ಕೇಂದ್ರವನ್ನಾಗಿ ಬೆಳೆಸಿದ್ದಾರೆ ಎಂದು ಅವರು ಹೇಳಿದರು.

ಕ್ಷೇತ್ರಕಾರ್ಯ ಸಂಶೋಧಕರಾಗಿ ಡಾ. ಕುಮಾರ್ ಅನೇಕ ಪ್ರಾಚೀನ ಕೃತಿಗಳನ್ನು ಸಂಗ್ರಹಿಸಿ ಸಂರಕ್ಷಿಸಿದ್ದಾರೆ. ಅವರ ಮನೆಯಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಪತ್ರಿಕೆಗಳು, ಸಂಚಿಕೆಗಳು, ಹಸ್ತಪ್ರತಿಗಳು ಹಾಗೂ ಅಪರೂಪದ ಸಾಹಿತ್ಯ ಸಂಪತ್ತು ಸಂಗ್ರಹವಾಗಿದ್ದು, ಕನ್ನಡ ಸಾಹಿತ್ಯ ಸಂಶೋಧಕರಿಗೆ ಇದು ಪ್ರಮುಖ ಮಾಹಿತಿ ಕೇಂದ್ರವಾಗಿದೆ ಎಂದರು.
ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿದಂತೆ, ಹಲಸಂಗಿ ಗೆಳೆಯರು, ಜಿ.ಶಂ.ಪ., ಕ್ಯಾತನಹಳ್ಳಿ ರಾಮಣ್ಣ ಹಾಗೂ ಪಿ.ಕೆ. ರಾಜಶೇಖರ್ ಅವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸೇವೆಯಂತೆಯೇ, ಡಾ. ಕುಮಾರ್ ತಮ್ಮ ಮನೆಯನ್ನು ಜ್ಞಾನಕಣಜವನ್ನಾಗಿ ರೂಪಿಸಿದ್ದಾರೆ. ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
‘ಮನೆಗೊಂದು ಗ್ರಂಥಾಲಯ’ ಯೋಜನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದರ ಬಗ್ಗೆ ಇತರ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಆಸಕ್ತಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಡಾ. ಮಾನಸ ಮಾತು
ಡಾ. ಬಿ.ಡಿ. ಕುಮಾರ್ ಅವರು ಸಂರಕ್ಷಿಸಿರುವ ತಾಳೆಗರಿ ರಾಮಾಯಣ ಗ್ರಂಥಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ತಾವು ಪ್ರಾಧಿಕಾರದ 10ನೇ ಅಧ್ಯಕ್ಷರಾಗಿದ್ದು, ಮೊದಲ ಅಧ್ಯಕ್ಷರಾಗಿದ್ದ ಎಲ್.ಎನ್. ಶೇಷಗಿರಿರಾವ್ ಅವರ ಕಾಲದಿಂದಲೇ ಪ್ರಾಧಿಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದರು.
ಪುಸ್ತಕ ಪ್ರಕಾಶಕರು ಮತ್ತು ಮುದ್ರಕರನ್ನು ಪ್ರೋತ್ಸಾಹಿಸಲು ‘ಪುಸ್ತಕ ಸೊಗಸು ಪ್ರಶಸ್ತಿ’, ನಗದು ಬಹುಮಾನ ಸೇರಿದಂತೆ ಹಲವು ಯೋಜನೆಗಳಿದ್ದು, ಪುಸ್ತಕ ಓದುವ ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಲಯವಾರು ನಾಲ್ಕು ಪ್ರಶಸ್ತಿಗಳನ್ನು ತಲಾ ₹25 ಸಾವಿರ ನಗದು ಬಹುಮಾನದೊಂದಿಗೆ ನೀಡಲಾಗುವುದು ಎಂದು ಹೇಳಿದರು.
‘ಅಕ್ಷರ ಕೃಷಿಕ’ ಕೃತಿ ಪರಿಚಯ
ಡಾ. ಬಿ.ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ‘ಅಕ್ಷರ ಕೃಷಿಕ’ ಕೃತಿಯನ್ನು ಪರಿಚಯಿಸಿದ ಅರಸೀಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹರೀಶ್ ಕುಮಾರ್, ಡಾ. ಕುಮಾರ್ ಅವರು ದೀರ್ಘಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ ಜನಪದ ಕಲಾವಿದರಾಗಿ ದೆಹಲಿಯಲ್ಲಿ ಕಾರ್ಯಕ್ರಮ ನೀಡಿದ್ದು, ಪ್ರಗತಿಪರ ಕೃಷಿಕರಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಗ್ರಂಥಾಲಯ ಸಂರಕ್ಷಣೆ ಅಗತ್ಯ: ಗೊರೂರು ಅನಂತರಾಜು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಬಂಜರು ನೆಲವನ್ನು ಫಲವತ್ತಾದ ತೋಟವನ್ನಾಗಿ ರೂಪಿಸಿ, ಅಪರೂಪದ ತಾಳೆಗರಿ ಗ್ರಂಥಗಳು ಹಾಗೂ ಮೌಲ್ಯಯುತ ಪುಸ್ತಕಗಳನ್ನು ಸಂರಕ್ಷಿಸಿರುವ ಡಾ. ಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿದರು.
ಈ ಗ್ರಂಥಾಲಯವನ್ನು ಸಂರಕ್ಷಿಸಿ, ಕನ್ನಡ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಡಾ. ಬರಾಳು ಶಿವರಾಮ, ಸುಂದರೇಶ್ ಡಿ. ಉಡುವಾರೆ, ರೈತ ಹೋರಾಟಗಾರ ಮನೋಹರ್ ಪಾಟೀಲ್, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ ಕಲಾವಿದ ಹರೀಶ್ ಕುಮಾರ್, ಹರ್ಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಡಾ. ಬಿ.ಡಿ. ಕುಮಾರ್ ದಂಪತಿಯನ್ನು ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ.ಡಿ. ಕುಮಾರ್ ಜನಪದ ಗೀತೆ ಹಾಡುವ ಮೂಲಕ ಪ್ರಾರ್ಥನೆ ನೆರವೇರಿಸಿದರು.
