ರಾಮನಾಥಪುರ : ಹೋಬಳಿಯ ಬಸವಪಟ್ಟಣ ಗ್ರಾಮದ ಶರಣೆ ವೀರಜಮ್ಮ (74) ಅವರ ಅಂತ್ಯಸಂಸ್ಕಾರ ಗುರುವಾರ ಕಾವೇರಿ ನದಿ ದಂಡೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು. ಕ್ರಿಯಾಸಮಾಧಿ ಸಂದರ್ಭದಲ್ಲಿ ವಿವಿಧ ಮಠಗಳ ಶ್ರೀಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಮತ್ತು ಬಂಧು-ಬಳಗದವರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಜೆ.ಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವಪಟ್ಟಣ ಗ್ರಾಮದ ಬಿ.ಆರ್. ಪಂಚಾಕ್ಷರಿ ಅವರ ತಾಯಿಯಾದ ಶರಣೆ ವೀರಜಮ್ಮ ಅವರ ಅಂತ್ಯಸಂಸ್ಕಾರದಲ್ಲಿ ಚುಲುಮೆ ಮಠ, ಕೆಸವತ್ತೂರು ಮಠ, ಟಿ. ಮಾಯಿಗೌಡನಹಳ್ಳಿ ಮಠ, ತೊರೆನೂರು ಮಠ ಹಾಗೂ ಕುರುಬರಹಳ್ಳಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಜೊತೆಗೆ ಜೆ.ಎಸ್.ಎಸ್. ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಶ್ರೀ ಸೋಮಶೇಖರಸ್ವಾಮೀಜಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಮೈಸೂರು ಬಿ.ವಿ. ಸುರೇಶ್, ಶಿರದನಹಳ್ಳಿ ಪ್ರಕಾಶ್, ಬಿ.ಆರ್. ಸುಧಾಕರ್, ಪುರೋಹಿತ ಜಗದೀಶ ಶಾಸ್ತ್ರಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
