ಶ್ಲೋಕ – 06
ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ ।
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥೬॥
ತತ್ರ ಸತ್ತ್ವಮ್ ನಿರ್ಮಲತ್ವಾತ್ ಪ್ರಕಾಶಕಮ್ ಅನಾಮಯಮ್ ।
ಸುಖ ಸಂಗೇನ ಬಧ್ನಾತಿ ಜ್ಞಾನ ಸಂಗೇನ ಚ ಅನಘ –ಅವುಗಳಲ್ಲಿ ಸತ್ವಗುಣ ಪರಿಶುದ್ಧವಾದದ್ದು. ಆದ್ದರಿಂದ ಜ್ಞಾನದ ಬೆಳಕು ನೀಡುವಂಥದು; ಬೇನೆಗಳನ್ನು ನೀಗುವಂಥದು. ಓ ಅನಘ, ಅದು ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ಕಟ್ಟಿಹಾಕುತ್ತದೆ.
ಕಣ್ಮುಚ್ಚಿ ಕುಳಿತು ನಿನ್ನೊಳಗೆ ನಿನ್ನನ್ನು ನೋಡು. ನಿನ್ನೊಳಗೆ ನಡೆಯುವ ಮಾನಸಿಕ ಬೆಳವಣಿಗೆಗಳು, ಚಿಂತನೆಗಳು, ಯೋಚನೆಗಳು, ಭಾವನೆಗಳನ್ನು ನೋಡು. ಸತ್ವ ಗುಣದ ಪ್ರಭಾವ ನಿನ್ನ ಮೇಲೆ ಆಗಿದ್ದರೆ-ನಿನ್ನೊಳಗೆ ನೀನು ಸ್ವಚ್ಛ, ನಿರ್ಮಲ ನಿರಾಳವಾದ ಪ್ರಜ್ವಲಿಸುವ ಬೆಳಕನ್ನು ಕಾಣುತ್ತೀಯ. ನಮ್ಮ ಅಂತರಂಗ ಪ್ರಪಂಚಕ್ಕೆ ಪೂರ್ಣ ವಿದ್ಯುತ್ ಸಂಪರ್ಕವಾಗಿದೆ, ದೀಪವನ್ನು, ಈ ದೀಪವನ್ನು ನಿಯಂತ್ರಿಸುವ ಅನೇಕ ಒತ್ತುಗುಂಡಿ(Switch)ಯನ್ನು ಅಳವಡಿಸಲಾಗಿದೆ. ಇಲ್ಲಿ ನಿರಂತರ ವಿದ್ಯುತ್ ಸರಬರಾಜಿದೆ. ಆದರೆ ನಮಗೆ ಈ ಸ್ವಿಚ್ ಎಲ್ಲಿದೆ ಅನ್ನುವುದು ಗೊತ್ತಿಲ್ಲ. ಆದ್ದರಿಂದ- ಎಲ್ಲ ಇದ್ದರೂ ಸದಾ ನಮ್ಮೊಳಗೆ ಕತ್ತಲು ಆವರಿಸಿಕೊಂಡಿರುತ್ತದೆ. ನಾವು ಅದನ್ನು ಉಪಯೋಗಿಸುವುದೇ ಇಲ್ಲ. ನಮ್ಮಲ್ಲಿ ಸತ್ವಗುಣ ಜಾಗೃತವಾದಾಗ ನಮಗೆ ಈ ಸ್ವಿಚ್ ಸಿಗುತ್ತದೆ. ಅದರಿಂದ ಯಾವುದೇ ದೋಷವಿಲ್ಲದ ಜ್ಞಾನದ ಬೆಳಕು ನಮ್ಮೊಳಗೆ ಬೆಳಗುತ್ತದೆ.
ಸತ್ವದ ಗುಣ ಜಾಗೃತವಾದಾಗ ನಮ್ಮಲ್ಲಿ ಅಂತರಂಗದ ಆನಂದ ತುಂಬಿ ತುಳುಕುತ್ತಿರುತ್ತದೆ. ಈ ಅನುಭವ ಹೆಚ್ಚಿನವರಿಗೆ ಆಗಿರುತ್ತದೆ. ಉದಾಹರಣೆಗೆ: ಕೆಲವೊಮ್ಮೆ ನಾವು ಹೇಳುವುದಿದೆ “ಏಕೋ ಇಂದು ಬಹಳ ಸಂತೋಷವಾಗುತ್ತಿದೆ” ಎಂದು. ಅಲ್ಲಿ ಏನೂ ವಿಶೇಷ ಕಾರಣವಿರುವುದಿಲ್ಲ. ಆದರೆ ಅಂತರಂಗದ ಆನಂದ ಹೊರ ಹೊಮ್ಮುವುದನ್ನು ನಾವು ಅನುಭವಿಸುತ್ತಿರುತ್ತೇವೆ. ಇದು ಸತ್ವ ಗುಣದ ಜಾಗೃತಾವಸ್ಥೆ. ಜ್ಞಾನದಿಂದ ಬರುವ ಸುಖವೆಲ್ಲವೂ ಸಾತ್ವಿಕ.
ಇಲ್ಲಿ ಒಂದು ಎಚ್ಚರವನ್ನು ಕೃಷ್ಣ ಕೊಡುತ್ತಾನೆ. ಸತ್ವಗುಣ ನಮ್ಮಲ್ಲಿ ಜಾಗೃತವಾಗಬೇಕಾದರೆ ನಾವು ‘ಅನಘ’ರಾಗಬೇಕು. ಪಾಪ ಸ್ಪರ್ಶ ನಮ್ಮಲ್ಲಿದ್ದರೆ-ಸತ್ವಗುಣ ಜಾಗೃತವಾಗದು. ಅದಕ್ಕಾಗಿ ನಾವು ಪಾಪ ದೂರರಾಗಬೇಕು. ಪಾಪ ಸ್ಪರ್ಶ ಎಷ್ಟು ಹೆಚ್ಚಾಯಿತೋ- ಅಷ್ಟು ಸತ್ವ ದೂರ ಹೋಗುತ್ತದೆ.
ಮೋಕ್ಷ ಸಾಧನೆಯಲ್ಲಿ ಸತ್ವಗುಣ ಸಾಧನವಾದರೂ ಕೂಡ, ಇದು ತ್ರಿಗುಣಗಳಲ್ಲಿ ಒಂದು. ಆದ್ದರಿಂದ ಸತ್ವಗುಣ ಕೂಡ ಬಂಧಕವಾಗಬಹುದು. ಇದು ಸುಖದ ನಂಟಿನಿಂದ ಮತ್ತು ತಿಳಿವಿನ ನಂಟಿನಿಂದ ನಮ್ಮನ್ನು ಕಟ್ಟಿ ಹಾಕಬಹುದು. ಉದಾಹರಣೆಗೆ: ಜ್ಞಾನ ಸಾಧನೆ ಸಾತ್ವಿಕ ಗುಣ. ಇಲ್ಲಿ ಭಗವಂತನ ವಿಷಯವಲ್ಲದ ಜ್ಞಾನ ಸಾಧನೆಯ ನಂಟಿನಲ್ಲಿ ನಾವು ಬಿದ್ದರೆ-ಆಗ ಅದು ಬಂಧಕವಾಗುತ್ತದೆ. ನಾವು ಯಾವುದೋ ಸಂಶೋಧನೆ, ಅನ್ವೇಷಣೆಯಲ್ಲಿ ಮುಳುಗಿದ್ದರೆ ಅದು ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಲಾರದು. ನಾವು ಆ ಸಂಶೋಧನೆಯಲ್ಲಿ ಬರುವ ಫಲಿತಾಂಶದ ಸುಖದ ನಂಟಿನಲ್ಲಿ ಸಿಲುಕಿ ಸತ್ವಗುಣದ ಬಂಧನಕ್ಕೊಳಗಾಗಬಹುದು. ಮೋಕ್ಷ ಸಾಧನೆಯಲ್ಲಿ ನಾವು ಸತ್ವವನ್ನೂ ದಾಟಬೇಕು-ಏಕೆಂದರೆ ಮೋಕ್ಷ ತ್ರಿಗುಣಾತೀತ. ಕೃಷ್ಣ ಇಲ್ಲಿ ಸತ್ವ ಗುಣವನ್ನು ‘ಬಧ್ನಾತಿ’ ಎಂದಿದ್ದಾನೆ. ಏಕೆಂದರೆ ಈ ಬಂಧನ ಸುಲಭದಲ್ಲಿ ಬಿಡಿಸಿಕೊಳ್ಳಬಹುದಾದ ಬಂಧನ. ಅದು ಎಂದೂ ನಮ್ಮನ್ನು ಕೆಳಕ್ಕೆಳೆಯುವುದಿಲ್ಲ. [ಆದರೆ ರಜಸ್ಸು ಮತ್ತು ತಮಸ್ಸು ‘ನಿಬಧ್ನಾತಿ’ ಎಂದು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಉಲ್ಲೇಖಿಸಿದ್ದಾನೆ]. ಯಾವ ಸತ್ವ ಭಗವಂತನ ಕಡೆಗೆ ಹೋಗದೆ ನಮ್ಮನ್ನು ಬಂಧನದಲ್ಲಿ ಸುತ್ತಾಡಿಸುತ್ತದೋ- ಆ ಸತ್ವದಿಂದ ನಾವು ಪಾರಾಗಬೇಕು.
