ರಾಮನಾಥಪುರ, ಜು.17: ರಾಮನಾಥಪುರ ಹೋಬಳಿಯಲ್ಲಿ ಆರಂಭಗೊಂಡಿದ್ದ ‘ಮಕ್ಕಳ ಮನೆ’ (LKG & UKG) ಯೋಜನೆ ಇಂದು ಇಡೀ ಅರಕಲಗೂಡು ತಾಲ್ಲೂಕಿನಾದ್ಯಂತ ವಿಸ್ತರಿಸಿ ಗ್ರಾಮೀಣ ಶಿಕ್ಷಣದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅವರ ಧರ್ಮಪತ್ನಿ ಹಾಗೂ ಮಕ್ಕಳ ಮನೆ ಯೋಜನೆಯ ಆಯೋಜಕಿ ತಾರಾ ಮಂಜು ಹೇಳಿದರು.
ರಾಮನಾಥಪುರ ಹೋಬಳಿಯ ಹನ್ಯಾಳು ಸೇರಿದಂತೆ ವಿವಿಧ ಗ್ರಾಮಗಳ ಮಕ್ಕಳ ಮನೆ ಶಾಲೆಗಳಿಗೆ ಭೇಟಿ ನೀಡಿ ಸುಮಾರು 700 ಮಕ್ಕಳಿಗೆ ಶಾಲಾ ಬ್ಯಾಗ್, ಎಲ್ಇಡಿ ಬರವಣಿಗೆ ಸ್ಲೇಟ್ ಹಾಗೂ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ರಾಮನಾಥಪುರ, ಲಕ್ಷ್ಮೀಪುರ, ಕೇರಳಾಪುರ, ಹೊನ್ನೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 20 ಮಕ್ಕಳ ಮನೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 700ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ರೈತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ವರ್ಷಕ್ಕೆ ₹40 ಸಾವಿರದಿಂದ ₹50 ಸಾವಿರದವರೆಗೆ ವೆಚ್ಚ ಮಾಡಬೇಕಾಗುತ್ತದೆ. ಮಕ್ಕಳ ಮನೆ ಯೋಜನೆಯಿಂದ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಿದ್ದು, ಒಟ್ಟಾರೆ ₹1.5 ಕೋಟಿಗೂ ಅಧಿಕ ವೆಚ್ಚ ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯುವ ಉದ್ದೇಶದಿಂದ ಶಾಸಕ ಎ. ಮಂಜು ಅವರ ಸಹಕಾರದೊಂದಿಗೆ ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ತಾರಾ ಮಂಜು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಂತೋಷ್, ಶಶಿ, ಪ್ರವೀಣ್, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
