ಶ್ಲೋಕ – 07
ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥೭॥
ರಜಃ ರಾಗಾತ್ಮಕಮ್ ವಿದ್ಧಿ ತೃಷ್ಣಾ ಸಂಗ ಸಮುದ್ಭವಮ್ ।
ತತ್ ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್—ರಜೋಗುಣ ರಂಜಿಸುವಂಥದು, ಆಸೆ-ಆಸಕ್ತಿಗಳನ್ನು ಹುಟ್ಟಿಸುವಂಥದು ಎಂದು ತಿಳಿ. ಕೌಂತೇಯ, ಅದು ಜೀವನನ್ನು ಕರ್ಮದ ನಂಟಿನಿಂದ ಕಟ್ಟಿಹಾಕುತ್ತದೆ.
ರಜಸ್ಸು ಅಂದರೆ ‘ರಾಗ’. ಒಂದು ವಸ್ತುವನ್ನು ತುಂಬಾ ಇಷ್ಟಪಡುವುದು, ಬಯಕೆಗಳ ಸರಮಾಲೆ- ಹೀಗೆ ಎಲ್ಲಾ ಪಂಚೇಂದ್ರಿಯಗಳ ಬಯಕೆ ರಜೋಗುಣದ ಪ್ರಭಾವದಿಂದ ಬರುವಂಥದ್ದು. ಇದು ತೃಷ್ಣಾ ಮತ್ತು ಸಂಗಕ್ಕೆ ಕಾರಣ. ಇಲ್ಲಿ ತೃಷ್ಣಾ ಅಂದರೆ ಬೇಕು-ಬೇಕು ಎನ್ನುವ ದಾಹ. ಸಂಗ ಎಂದರೆ ಒಂದು ವಸ್ತುವಿನ ನಿರಂತರ ಒಡನಾಟ. ರಜೋಗುಣ ಬಯಕೆಯನ್ನು ಹುಟ್ಟಿಸುತ್ತದೆ. ಆ ಬಯಕೆಯಿಂದ ಒಡನಾಟ, ಒಡನಾಟದಿಂದ ಅದು ಅಂಟಿಕೊಳ್ಳುವಂತೆ ಮಾಡುತ್ತದೆ. ಹೀಗೆ ಹಂತ ಹಂತವಾಗಿ ರಜೋಗುಣ ನಮ್ಮನ್ನು ಬಿಡಿಸಿಕೊಳ್ಳಲಾಗದ ಬಂಧನಕ್ಕೊಳಪಡಿಸುತ್ತದೆ(ನಿಬಧ್ನಾತಿ). ಇದರ ಪ್ರಭಾವದಿಂದ ನಾವು ಜ್ಞಾನದ ಬಯಕೆ ಇಲ್ಲದ ಕರ್ಮಸಂಗ ಮಾಡಲಾರಂಭಿಸುತ್ತೇವೆ. ಉದಾಹರಣೆಗೆ: ದುಡ್ಡಿಗಾಗಿ ಹೋರಾಟ, ದುಡ್ಡಿಗಾಗಿ ಇಡೀ ಬದುಕನ್ನು ಮೀಸಲಿಡುವುದು. ದುಡ್ಡೇ ಪ್ರಪಂಚ ಎಂದು ಹೋರಾಡುವುದು, ಇತ್ಯಾದಿ. ಇದು ರಜಸ್ಸಿನ ಗಾಢವಾದ ಬಂಧನದ ಪ್ರಭಾವ.
