ಚನ್ನರಾಯಪಟ್ಟಣ, ಜು. 25: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಪುನರ್ಜೀವ ಸ್ವಯಂ ಸೇವಾ ಸಂಸ್ಥೆ, ಶ್ರೀರಾಮ ಯುವಕರ ಸಂಘ, ಜನಪ್ರಿಯ ಆಸ್ಪತ್ರೆ ಹಾಸನ ಹಾಗೂ ಸರ್ಕಾರಿ ಆಸ್ಪತ್ರೆ ಚನ್ನರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಕುಮಾರ್ ಹೆಚ್.ಜಿ., ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ವೈದ್ಯಕೀಯ, ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿಷ್ಕಲ್ಮಶ ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ಕುಟುಂಬಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶ ಸಾರ್ವಜನಿಕರ ಆರೋಗ್ಯ ಕಾಪಾಡುವುದು, ರಕ್ತದ ಕೊರತೆಯ ಸಂದರ್ಭದಲ್ಲಿ ನೆರವು ನೀಡುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಎಂದು ತಿಳಿಸಿದ ಅವರು, ಈ ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ ತಪಾಸಣೆ (ಇಸಿಜಿ), ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲು ತಪಾಸಣೆ, ದಂತ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ ಎಂದು ಹೇಳಿದರು. ಇದೇ ವೇಳೆ ಪುನರ್ಜೀವ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರವೂ ಆಯೋಜಿಸಲಾಗಿತ್ತು.
ಪರಿಸರ ಪ್ರೇಮಿ ಪ್ರಶಸ್ತಿ ಪುರಸ್ಕೃತ ಸಿ.ಎನ್. ಅಶೋಕ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ನೀಡುತ್ತಿದ್ದು, ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಆಯೋಜಕ ಚೇತನ್ ಕುಮಾರ್ ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸಿದ್ದು, ಈ ಶಿಬಿರದಲ್ಲಿ 417ಕ್ಕೂ ಹೆಚ್ಚು ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.

ಶ್ರೀರಾಮ ಯುವಕರ ಸಂಘದ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಕೆರೆಬೀದಿ ಸೇರಿದಂತೆ ಸುತ್ತಮುತ್ತಲಿನ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಆರೋಗ್ಯ ಶಿಬಿರದಿಂದ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಜಬಿಉಲ್ಲಾ ಬೇಗ್, ಧರ್ಮಸ್ಥಳ ಸಂಘದ ಅಧ್ಯಕ್ಷೆ ವೀಣಾ, ಮಾಜಿ ಪುರಸಭೆ ಅಧ್ಯಕ್ಷ ನಾಗರಾಜ್ ಸಿ., ಜನಪ್ರಿಯ ಆಸ್ಪತ್ರೆಯ ಹೃದಯ ತಜ್ಞ ಡಾ. ಮಂಜುನಾಥ್, ಡಾ. ಫೈಜರ್, ಡಾ. ಶೋಯಬ್, ಸರ್ಕಾರಿ ಆಸ್ಪತ್ರೆಯ ಡಾ. ಚಿನ್ಮಯ್, ಕಣ್ಣಿನ ತಜ್ಞ ಡಾ. ಶೇಖರ್, ಜನಪ್ರಿಯ ಆಸ್ಪತ್ರೆಯ ಚಂದನ್, ಪ್ರಮೋದ್, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, ಶ್ರೀರಾಮ ಯುವಕರ ಸಂಘದ ಸದಸ್ಯರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
