ಕಾಲೇಜಿಗೆ ತರಿಸುತ್ತಿದ್ದ ಇಂಗ್ಲಿಷ್ ಪತ್ರಿಕೆಯನ್ನು ಬಸ್ಸಿನಲ್ಲಿ ವಿಶಾಲವಾಗಿ ತೆರೆದು, ಭಾರೀ ಸಂಶೋಧಕನ ಗತ್ತಿನಲ್ಲಿ ಓದುತ್ತಾ ಗಮನ ಸೆಳೆಯಲು ಯತ್ನಿಸುತ್ತಿದ್ದ ಒಬ್ಬ ಕಾಲೇಜು ಉಪನ್ಯಾಸಕನ ಪಕ್ಕದಲ್ಲಿ ಕುಳಿತಿದ್ದ, ಗುಟ್ಕಾ ತಿಂದು ಗೆದ್ದಲಾಗಿದ್ದ ಹಲ್ಲುಗಳಿದ್ದ ಹೈಸ್ಕೂಲ್ ಮೇಷ್ಟ್ರೊಬ್ಬರು ಜನರನ್ನು, “ಹೀಗೆ ಬನ್ನಿ, ಅಲ್ಲಿ ನಿಲ್ಲಿ, ಮುಂದೆ ಕುಳಿತುಕೊಳ್ಳಿ, ಚೇಂಜ್ ರೆಡಿ ಇಟ್ಕೊಳ್ಳಿ” ಎಂದು ಕಂಡಕ್ಟರ್ನ ಸಹಾಯಕನಂತೆ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಅದರೊಳಗೆ ಕಣ್ಣು ಕಾಣದ ಭಿಕ್ಷುಕನೊಬ್ಬ ಎರಡೂ ಬದಿಯ ಸೀಟುಗಳ ನಡುವಿನ ಆಧಾರ ಕಂಬವನ್ನೇ ಎಂಟಾಣೆ ನಾಣ್ಯಗಳಿಂದ ಕುಟ್ಟುತ್ತಾ, “ಶಿವಪ್ಪಾ ಕಾಯೋ ತಂದೆ…” ಹಾಡನ್ನು ಆರಂಭಿಸಿದ.
ಇತ್ತ ರೈತರ ಒತ್ತಡಕ್ಕೆ ಮಣಿದ ಡ್ರೈವರ್ ತನ್ನ ಕ್ಯಾಬಿನ್ನಲ್ಲೇ ಕೆಲವು ಮೂಟೆಗಳನ್ನು ಇಡಲು ಅವಕಾಶ ಮಾಡಿಕೊಟ್ಟ ನಂತರ, ಅಂತೂ ಇಂತೂ ಬಸ್ ಎಂದಿನಂತೆ ತನ್ನ ಸಕಲೇಶಪುರ ಪ್ರಯಾಣ ಮುಂದುವರಿಸಿತು.
“ರೀ ಕಂಡಕ್ಟರೇ! ಈ ಕುಡುಕನ್ನ ಇಳಿಸಲ್ಲಲ್ವಾ? ವಾಸನೆ ತಡೆಯಕ್ಕಾಗ್ತಿಲ್ಲ. ಈ ಮೀನು ಬೇರೆ! ನಮ್ಮ ಜೀವನೇ ಹೋಗ್ತಾ ಇದೆ. ಕೆಳಗಿಡೋ ಆ ಮೀನಿನ ಕವರ್ನಾ, ಕೆಳಕ್ಕಾಕೋ ಮಾರಾಯ!” ಎಂದು ಕರೀಗೌಡರು ಹೇಳಿದರು.
“ಏನ್ರೀ ಗೌಡ್ರೇ! ಭಾರೀ ಸಂಪನ್ನರಂತೆ ಮಾತಾಡ್ತೀರಾ. ನಿಮ್ಮ ಬ್ಯಾಗ್ ತೋರಿಸಿ, ನೀವು ಮೀನು ತಗೊಂಡಿಲ್ವಾ? ತರಿಸಿ ನೋಡೋಣ. ನಿಮಗೇನೋ ಜಾಗ ಸಿಕ್ಕಿದೆ, ಅದಕ್ಕೆ ಆರಾಮಾಗಿ ಕೂತಿದ್ದೀರಿ. ನೀವು ಕುಡಿಯಲ್ವಾ? ಆದರೆ ಕೆಂಪನೇದನ್ನ ಕುಡಿತೀರಷ್ಟೇನಾ? ನಿಮ್ಮ ಮನೇಲೇ ಮಾರಲ್ವಾ? ನೀವು ಕೇಸ್ಕೇಸ್ಗಟ್ಟಲೆ ತಗೊಂಡೋಗಿ, ಒಂದಕ್ಕೆ ಎರಡು ರೇಟಿಗೆ ಮಾರಿ ಊರಿಗೆಲ್ಲಾ ಕುಡಿಸ್ತೀರಲ್ಲ! ಇಲ್ಲಿ ನನಗೆ ಕುಡುಕ ಅಂತೀರಾ? ಕುಡುಕರೇ ಸಾರ್ ಸತ್ಯ ಹೇಳೋದು; ನಾವೇ ನಿಜ ಮಾತಾಡೋದು.”
“ಅದೇ ನಿಮ್ಮ ತಂಗಿ ಮಗಳು, ಯಾರ ಜೊತೆಯೋ… ಅದೇ ಪಕ್ಕದ ತೋಟದ ರೈಟರ್ ಜೊತೆ ಓಡೋದ್ಲಂತೆ. ಏನಾಯ್ತು ಆಮೇಲೆ? ಏನಾದ್ರೂ ಗೊತ್ತಾಯ್ತಾ?” ಎಂದು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ, ಆದರೆ ಎಲ್ಲ ಪ್ರಯಾಣಿಕರೂ ಕೇಳುವಂತೆ ಪಾಶುಪತಾಸ್ತ್ರದಂತೆ ಪ್ರಶ್ನೆ ಎಸೆದ.
ಕರೀಗೌಡರು ತಮ್ಮ ತಲೆಯ ಮೇಲಿನ ಟೋಪಿಯನ್ನು ಐದಾರು ಬಾರಿ ತಿಕ್ಕಿ, ತಲೆ ತುರಿಸಿಕೊಂಡು, ಸರಿಯಾಗಿ ಕೂರಿಸಿಕೊಂಡು, ಆ ಮೀನಿನ ಆಸಾಮಿಯನ್ನು ನುಂಗುವಂತೆ ನೋಡುತ್ತಾ, “ನನ್ನ ಮರ್ಯಾದೆಯನ್ನೇ ಈ ಬಸ್ನಲ್ಲಿ ಎಲ್ಲರ ಎದುರು ತೆಗೆದಿಬಿಟ್ಟನಲ್ಲ!” ಎಂಬಂತೆ ಒಳಗೊಳಗೆ ಉರಿಯತೊಡಗಿದರು.
ಆದರೆ ಆ ಅಸಾಮಿ ಸುಮ್ಮನಿರದೆ, “ಅಲ್ಲಾ ಗೌಡ್ರೇ, ಹೆಣ್ಣು ಹುಡುಗಿಗೆ ಇಪ್ಪತ್ನಾಲ್ಕೋ, ಇಪ್ಪತ್ತೈದೋ ವಯಸ್ಸಿರಬೇಕು. ಯಾರೋ ಕೊಡಗಿನವನಂತೆ. ಹುಡುಗಿ ಮನೆಯವರೇ ಸುಮ್ಮನಾದ್ರಂತೆ, ಹೌದಾ? ಮದುವೆ ಖರ್ಚು ಉಳಿಯಿತು ಅಂತಾಯ್ತು ಹಾಗಾದ್ರೆ. ಆದರೂ ನಿಮ್ಮನ್ನೊಂದು ಮಾತು ಕೇಳಿ ಓಡಿಹೋಗಬೇಕಿತ್ತು. ಏನೇ ಹೇಳಿ, ಹೀಗಾಗಬಾರದಿತ್ತು. ಛೇ… ಛೇ…” ಎಂದ.
ಕರೀಗೌಡರು ನಖಶಿಖಾಂತ ಉರಿದೆದ್ದು, “ಏ ಪುಟ್ಟಸಾಮಿ, ನೋಡಿಲ್ಲಿ! ಈ ಕುಡುಕ ನನ್ನಮಗ ಏನು ಬೊಗಳ್ತಿದಾನೆ!” ಎಂದು ಅಬ್ಬರಿಸಿದರು.
ಮುಂದಿನ ನಾಲ್ಕನೇ ಸೀಟಿನಲ್ಲಿದ್ದ ಪುಟ್ಟಸ್ವಾಮಿ ಕರೀಗೌಡರ ತಮ್ಮನ ಮಗ. ವ್ಯವಸಾಯ ಮಾಡಿಕೊಂಡಿದ್ದವನು, ಸಂತೆಗೆಂದು ಇಂದು ಮೂಡಿಗೆರೆಗೆ ಬಂದಿದ್ದ. ಭಾರೀ ಗಾತ್ರದ ಪುಟ್ಟಸ್ವಾಮಿ ಎದ್ದು ನಿಂತ. ಆದರೆ ಅಷ್ಟೊಂದು ಜನ ತುಂಬಿದ್ದ ಬಸ್ನಲ್ಲಿ ಮೀನಿನ ಅಸಾಮಿ ಇದ್ದಲ್ಲಿಗೆ ತಲುಪುವುದೇ ಅಸಾಧ್ಯವಾಗಿತ್ತು. ಹೆಜ್ಜೆ ಕಿತ್ತಿಡುವುದೂ ಸಾಹಸದ ಕೆಲಸವಾಗಿತ್ತು.
ಅಷ್ಟರಲ್ಲಿ ಜನ್ನಾಪುರ ಸ್ಟಾಪ್ ಬಂದಿದ್ದರಿಂದ ಅನೇಕರು ಬಸ್ನಿಂದ ಇಳಿಯಲಾರಂಭಿಸಿದರು. ಕಂಡಕ್ಟರ್ ಇನ್ನೂ ಕೆಲವರಿಗೆ ಟಿಕೆಟ್ ಕೊಡಬೇಕಿತ್ತು.
ಡ್ರೈವರ್ಗೆ ಕಂಡಕ್ಟರ್, “ಸೇತುವೆ ಬಳಿಯೇ ನಿಲ್ಲಿಸು. ಎಲ್ಲರಿಗೂ ಟಿಕೆಟ್ ಆದ ಮೇಲೆ ಜನ್ನಾಪುರಕ್ಕೆ ಬಿಡು ಎಂದಿದ್ದೆ. ಈಗ ನೋಡು, ಇನ್ನೂ ಯಾರಿಗೂ ಸರಿಯಾಗಿ ಟಿಕೆಟ್ ಆಗಿಲ್ಲ. ಆಗಲೇ ಜನ ಸ್ಟಾಪ್ ಬಂತು ಅಂತ ಇಳಿಯಲು ಶುರು ಮಾಡಿದ್ದಾರೆ,” ಎಂದು ಆರೋಪಿಸಿದ.
ಇನ್ನೇನು ಆರು ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ಡ್ರೈವರ್ ತಾಳ್ಮೆಯಿಂದ, “ಸರಿ, ನಿಲ್ಲಕ್ಕೆ ಹೇಳಿ ಟಿಕೆಟ್ ಕೊಡೋ ಮಾರಾಯ. ಸೇತುವೆ ಬಳಿ ನಿಲ್ಲಿಸಿದ್ದಿದ್ರೆ ಈ ಲೋಡಲ್ಲಿ ಆಪ್ ಹತ್ತಿಸೋಕೆ ಆಗ್ತಿರಲಿಲ್ಲ. ಅದಕ್ಕೆ ಅದೇ ಸ್ಪೀಡಲ್ಲಿ ಇಲ್ಲಿಗೆ ತಂದಿದ್ದೀನಿ. ನಾನಿನ್ನೂ ಬಸ್ ಸ್ಟಾಪ್ನಲ್ಲಿ ನಿಲ್ಲಿಸಿಲ್ಲವಲ್ಲ,” ಎಂದ.
“ಊರು ಬಂದ ಮೇಲೆ ಬಸ್ ಸ್ಟಾಪ್ ಆದ್ರೇನು? ಎಲ್ಲಾದ್ರೇನು? ನೀನು ನಿಲ್ಲಿಸಿರೋ ಜಾಗ ಅವರವರ ಊರಿಗೆ ಹೋಗೋ ಕೈಮರದ ಬಳಿಯೇ ಇದೆ. ಕೇಳಿದ್ರೆ ಹುಡುಗರಾದ್ರೆ ಪಾಸ್ ಅಂತಾರೆ. ವಯಸ್ಸಾದವರಾದ್ರೆ ನಾಲ್ಕು ರೂಪಾಯಿ ಟಿಕೆಟ್ಗೆ ಎರಡು ರೂಪಾಯಿ ಕೊಟ್ಟು ಟಿಕೆಟ್ ಬೇಡ ಅಂತಾರೆ. ಏನು ಮಾಡೋದು?” ಎಂದು ಕಂಡಕ್ಟರ್ ಉತ್ತರಿಸಿದ.
ಪುಟ್ಟಸ್ವಾಮಿಗೆ ಕರೆದಿದ್ದರೆ, ನಮ್ಮ ನಮ್ಮ ಹೀರೋಯಿನ್ಗಳ ಮುಂದೆ ಈ ಕೈಲಾಗದ ಕುಡುಕನಿಗೆ ನಾಲ್ಕು ತದುಕಿ ಹೀರೋಗಳಾಗಬಹುದಿತ್ತು ಎಂದು ಅನೇಕ ಕಾಲೇಜು ಹುಡುಗರು ಮನಸ್ಸಿನಲ್ಲೇ ಅಂದುಕೊಂಡು, “ಈ ಕರೀಗೌಡ ಎಂಥಾ ಕೆಲಸ ಮಾಡಿಬಿಟ್ಟ!” ಎಂದು ಹಳಹಳಿಸಿದರು.
ಕುಡುಕನೊಂದಿಗೆ ಕುಸ್ತಿಮಾಡಿ ಅಪಮಾನಿತನಾಗಲು ಇಷ್ಟವಿಲ್ಲದ ಪುಟ್ಟಸ್ವಾಮಿ ಮೀನಿನ ಆಸಾಮಿಯನ್ನು ಕರೆದು, “ಕೂರಲು ಜಾಗವಿಲ್ಲವೇನಯ್ಯಾ? ಬಾಯಿಲ್ಲಿ, ನನಗೆ ಯಾಕೋ ಕಾಲು ಮರಗಟ್ಟಿ ನೋಯುತ್ತಿದೆ. ನಿಂತರೆ ಸರಿಯಾಗುತ್ತೆ,” ಎಂದು ಹೇಳಿ ತನ್ನ ಸೀಟನ್ನೇ ಬಿಟ್ಟುಕೊಟ್ಟ.
ತರಕಾರಿ ಚೀಲ ಬೀಳಿಸಿದ್ದವನು ಸಾಕಷ್ಟು ಸಾಮಾನು ಎತ್ತಿಕೊಟ್ಟಿದ್ದರೂ ಮುಕ್ಕಾಲು ಭಾಗ ಮಾತ್ರ ಸಿಕ್ಕಿತ್ತು. ಚೀಲದ ಯಜಮಾನ ಇನ್ನೂ ಬುಸುಗುಡುತ್ತಲೇ ಇದ್ದ. ಬೀಳಿಸಿದ್ದವನು ಆತನನ್ನು ಸಮಾಧಾನಪಡಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದ.
ಅಷ್ಟರಲ್ಲಿ ಬೆಟ್ಟದಮನೆ ಸ್ಟಾಪ್ ಬಂತು. ತರಕಾರಿ ಚೀಲದವನು ದುಸದುಸ ಎನ್ನುತ್ತಲೇ ಇಳಿದುಹೋದ.
ಇಂಗ್ಲಿಷ್ ಪತ್ರಿಕೆ ಓದುವುದರಲ್ಲಿ ಮುಳುಗಿಹೋಗಿದ್ದ ಉಪನ್ಯಾಸಕ, ಕಂಡಕ್ಟರ್ ಬಂದರೂ ತಲೆಯೆತ್ತದೇ ಓದುವಂತೆ ನಟಿಸುತ್ತಾ ಕುಳಿತಿದ್ದ. ಮುಂದೆ ಕಿರುಗುಂದದ ಬಳಿ ತನ್ನ ಸ್ಟಾಪ್ ಬಂತೆಂದು ತಡಬಡಾಯಿಸಿ ಎಚ್ಚರಗೊಂಡಂತೆ ಮಾಡಿ, ಅಲ್ಲಿನ ಹತ್ತು ರೂಪಾಯಿ ಚಾರ್ಜ್ ಬದಲು ಐದು ರೂಪಾಯಿಯನ್ನು ಕಂಡಕ್ಟರ್ ಕೈಯಲ್ಲಿಟ್ಟು, “ಟಿಕೆಟ್ ಬೇಡ” ಎಂದು ಇಳಿದುಹೋದ.
ಅಷ್ಟರಲ್ಲಾಗಲೇ ನನಗೂ ಒಂದು ಸೀಟು ಸಿಕ್ಕಿತ್ತು. ನನಗೆ ಟಿಕೆಟ್ ಕೊಡುತ್ತಾ ಕಂಡಕ್ಟರ್, “ಮಾನ ಇಲ್ಲ, ಮರ್ಯಾದೆ ಇಲ್ಲ. ಜಂಟಲ್ಮನ್ನಂತೆ ಕಾಣಿಸ್ತಾನೆ. ಕಾಲೇಜಿನಲ್ಲಿ ಪಾಠ ಮಾಡ್ತಾನಂತೆ. ಒಂದು ಟಿಕೆಟ್ ತಗೊಳ್ಳೋಕ್ಕಾಗಲ್ಲ. ಕೈಗೆ ಸಿಕ್ಕಿದಷ್ಟು ಕೊಟ್ಟು ಟಿಕೆಟ್ ಬೇಡ ಅಂತಾನೆ. ಇಂಥವರಿದ್ರೆ ಸರ್ಕಾರ ಉಳಿದಂಗೇ,” ಎಂಬಂತೆ ತನ್ನೊಳಗೇ ಗೊಣಗಿಕೊಂಡ.
ಸರ್ಕಾರಕ್ಕೆ ಆದ ನಷ್ಟದ ಬಗ್ಗೆ ಹೇಳಿದವನು, ತನಗೆ ಆದ ಲಾಭದ ಬಗ್ಗೆ ಮಾತ್ರ ಏನೂ ಹೇಳಿಕೊಳ್ಳಲಿಲ್ಲ.
ಬಸ್ ಸರಿಸುಮಾರು ಅರ್ಧದಷ್ಟು ಖಾಲಿಯಾಗಿತ್ತು. ಆಚೆ-ಈಚೆ ನೋಡುತ್ತೇನೆ. ಕರೀಗೌಡ, ಪುಟ್ಟಸ್ವಾಮಿ, ಭೂತಾಯಿ ಮೀನಿನವ, ಹದಿನಾರು ಕೆಲಸದವರು—ಯಾರೂ ಬಸ್ನೊಳಗೆ ಇರಲಿಲ್ಲ. ಅರೆ! ಇವರೆಲ್ಲ ಯಾವಾಗ ಇಳಿದುಹೋದರು ಎಂದು ಅಚ್ಚರಿಯಾಯಿತು.
ಸರ್ಕಾರಿ ಬಸ್, ಅದರಲ್ಲೂ ಸರ್ಕಾರಿ ಷಟಲ್ ಬಸ್; ಅದರಲ್ಲೂ ಸಂತೆ ದಿನದ ಸರ್ಕಾರಿ ಷಟಲ್ ಬಸ್—ನಿಜವಾಗಿಯೂ ಒಂದು ಗ್ರಾಮಭಾರತವನ್ನೇ ತನ್ನ ಹೊಟ್ಟೆಯೊಳಗೆ ಹೊತ್ತು, ತೇಲುತ್ತಾ, ತೇಕುತ್ತಾ, ಮುಗ್ಗರಿಸುತ್ತಾ, ಇಳಿಜಾರಿನಲ್ಲಿ ಈಜುತ್ತಾ, ಏರಿಯಲ್ಲಿ ಏದುಸಿರು ಬಿಡುತ್ತಾ, ಸಮತಟ್ಟು ತಲುಪಿದಾಗ ನಿಟ್ಟುಸಿರು ಬಿಡುತ್ತಾ, ಅಂತೂ ನಿಲ್ಲದೆ ಸಾಗುತ್ತಲೇ ಇರುತ್ತದೆ.
ಭಾರತದಂಥ ದೇಶವೂ ದೇವರ ದಯೆಯಿಂದ ಹೀಗೆಯೇ ನಡೆಯುತ್ತಿದೆಯೇನೋ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಮೂಡಿತು.
ಮುಂದುವರೆಯುತ್ತದೆ……

