ಕೊರಟಗೆರೆ : – ರಾಜ್ಯ ರಾಜಕಾರಣದಲ್ಲಿ ಸರಳತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧಾರಿತ ರಾಜಕಾರಣದ ಮೂಲಕ ಅಚ್ಚಳಿಯದ ಗುರುತು ಮೂಡಿಸಿದ್ದ ಮಾಜಿ ಸಚಿವ, ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಸಿ. ವೀರಣ್ಣ (86) ಅವರ ಅಂತ್ಯಕ್ರಿಯೆ ಶನಿವಾರ ಬುಕ್ಕಾಪಟ್ಟಣದಲ್ಲಿರುವ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಅನಾರೋಗ್ಯದಿಂದ ಬಳಲುತ್ತಿದ್ದ ವೀರಣ್ಣ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ಬುಕ್ಕಾಪಟ್ಟಣದ ತೋಟದ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.ನಂತರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯ ಎಲ್ಲ ಶಾಸ್ತ್ರೋಕ್ತ ವಿಧಿವಿಧಾನಗಳಲ್ಲಿ ಮಾಜಿ ಲೋಕಸಭಾ ಸದಸ್ಯ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಅವರು ಕುಟುಂಬ ಸದಸ್ಯರಾಗಿ ಹಾಗೂ ಅಳಿಯನಾಗಿ ಪ್ರಾರಂಭದಿಂದ ಅಂತ್ಯದವರೆಗೆ ಪಾಲ್ಗೊಂಡು ಅಂತಿಮ ವಿಧಿಗಳನ್ನು ನೆರವೇರಿಸಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಂತಿಮ ನಮನ ಸಲ್ಲಿಸಿ ಸಿ. ವೀರಣ್ಣ ಅವರ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಲಾಗದ ನಷ್ಟ. ಸರಳತೆ, ಪ್ರಾಮಾಣಿಕತೆ ಹಾಗೂ ಜನಸೇವೆಯ ಮೂಲಕ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಅವರ ಸೇವೆ ಸದಾ ಸ್ಮರಣೀಯ ಎಂದು ಶ್ರದ್ಧಾಂಜಲಿ ಅರ್ಪಿಸಿದರು.

*ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ
*
1983 ಮತ್ತು 1985ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ. ವೀರಣ್ಣ ಅವರು, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಣ್ಣ ಉಳಿತಾಯ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದುಕೊಟ್ಟ ನಾಯಕರಾಗಿ ಗುರುತಿಸಿಕೊಂಡಿದ್ದರು. ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

*ಗಣ್ಯರ ಅಂತಿಮ ನಮನ*
ಅಂತ್ಯಕ್ರಿಯೆಯಲ್ಲಿ ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ಪಿ.ಆರ್. ಸುಧಾಕರ್ ಲಾಲ್, ಗೌರಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಸುಮ ಜಗನ್ನಾಥ್, ರಂಗಶಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಮುಖಂಡರಾದ ವಿ.ಎಸ್. ಮೂರ್ತಿ, ಪ್ರೇಮ ಮಹಾಲಿಂಗಯ್ಯ, ಎಡಿ ಬಲರಾಮಯ್ಯ, ಪಿ.ಎನ್. ಕೃಷ್ಣಮೂರ್ತಿ, ಎಂ.ಎನ್.ಜೆ. ಮಂಜುನಾಥ್, ಹನುಮಂತರಾಯಪ್ಪ, ಎಲ್ಐಸಿ ರಾಜಣ್ಣ, ದಿನೇಶ್, ಕೆ.ಆರ್. ಓಬಳರಾಜು, ವಿನಯ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ರಾಜಕೀಯದಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಜನಸೇವೆಗೆ ಬದುಕನ್ನು ಸಮರ್ಪಿಸಿದ್ದ ಸಿ. ವೀರಣ್ಣ ಅವರ ಅಗಲಿಕೆ ಕೊರಟಗೆರೆ ಮಾತ್ರವಲ್ಲ, ರಾಜ್ಯ ರಾಜಕಾರಣಕ್ಕೂ ಅಪೂರಣೀಯ ನಷ್ಟವಾಗಿದೆ ಎಂದು ಅಂತಿಮ ನಮನ ಸಲ್ಲಿಸಿದ ಗಣ್ಯರು ಅಭಿಪ್ರಾಯಪಟ್ಟರು.
– ಶ್ರೀನಿವಾಸ್ ಕೊರಟಗೆರೆ.
