ರಾಮನಾಥಪುರ, ಜು. 26: ನಮ್ಮ ಹಿರಿಯರ ತಪಸ್ಸು, ಧೈರ್ಯ ಮತ್ತು ಸಮರ್ಪಣೆಯ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಅವರ ಆದರ್ಶಗಳನ್ನು ಅನುಸರಿಸಿ ಬದುಕನ್ನು ಉನ್ನತಗೊಳಿಸಬೇಕು ಎಂದು ತೇಜೂರು ಮಠದ ಶ್ರೀ ಕಲ್ಯಾಣಸ್ವಾಮೀಜಿ ಹೇಳಿದರು.

ರಾಮನಾಥಪುರ ಹೋಬಳಿಯ ಬಸವಪಟ್ಟಣದ ಶರಣ ಪಂಚಾಕ್ಷರಿ ಅವರ ನಿವಾಸದಲ್ಲಿ ಆಯೋಜಿಸಿದ್ದ ರುದ್ರಾಭಿಷೇಕ ಹಾಗೂ ಶರಣೆ ವೀರಜಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಗವಂತನ ಕೃಪೆಯಿಂದ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕೆಸವತ್ತೂರು ಮಠದ ಶ್ರೀಗಳು, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಸಾಹಿತಿ ಪರಶಿವಮೂರ್ತಿ, ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಿ.ಆರ್. ಪಂಚಾಕ್ಷರಿ ಸೇರಿದಂತೆ ಅನೇಕ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
