ಕೆ.ಆರ್.ಪೇಟೆ,ಜು.27: ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ಸದೃಢವಾಗಿದೆ ಎಂಬುದು ಇಲ್ಲಿ ಸೇರಿರುವ ಕಾರ್ಯಕರ್ತರೇ ಸಾಕ್ಷಿಯಾಗಿದೆ. ಕಾರ್ಯಕರ್ತರ ಉತ್ಸಾಹ ನೋಡಿದರೆ ತಾಲ್ಲೂಕಿನಲ್ಲಿ 2028ಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗುವುದು ಖಚಿತ. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಎಐಸಿಸಿ ಹಾಗೂ ರಾಜ್ಯ ಕೆಪಿಸಿಸಿ ಪೂರ್ಣ ಸಹಕಾರ ನೀಡಲಿದೆ ಇದಕ್ಕೆ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ವೀಕ್ಷಕರಾದ ಸೈಮನ್ ಅಲೆಕ್ಸ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಂಘಟನಾ ಸೃಜನ್ ಅಭಿಯಾನ ಕಾರ್ಯಕ್ರಮ ಹಾಗೂ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಮುಖಂಡರು ಅಭಿಪ್ರಾಯ ಸಂಗ್ರಹಿಸುವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಮುಖಂಡರು ಹಾಗೂ ಮಾಜಿ ಶಾಸಕರು ಹಾಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧೀ ಅವರು ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರಿಂದ ಹಿಡಿದು ತಾಲ್ಲೂಕು., ಜಿಲ್ಲಾ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಇದೇ ರೀತಿಯ ಸಾಮಾನ್ಯ ಕಾರ್ಯಕರ್ತರ ಸಂಗ್ರಹಿಸಿ ಜಿಲ್ಲಾಧ್ಯಕ್ಷ ಆಯ್ಕೆಗೆ ಚಾಲನೆ ನೀಡಲಾಗಿದೆ ಎಂದರು.

ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಒಬ್ಬೊಬ್ಬರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು. ಅವರು ಯಾರನ್ನು ಸೂಚಿಸುತ್ತಾರೆ. ಏಕೆ ಸೂಚಿಸುತ್ತಾರೆ. ಅವರ ಹಿನ್ನೆಲೆ ಏನು, ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನು ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಲಾಗುವುದು. ಇಲ್ಲಿ ಯಾವುದೇ ಪ್ರಭಾವಿ ಮುಖಂಡರ ಶಿಫಾರಸ್ಸುಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಕೇವಲ ಕಾರ್ಯಕರ್ತರ ಅಭಿಪ್ರಾಯವೇ ಅಂತಿಮವಾಗಿರುತ್ತದೆ. 2028ಕ್ಕೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಬೇಕು.

2029ಕ್ಕೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ 28ಕ್ಷೇತ್ರಗಳ ಪೈಕಿ ಕನಿಷ್ಠ 25ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾಧ್ಯಕ್ಷರಾದವರು ಕಾಂಗ್ರೆಸ್ ಪಕ್ಷದ ನಾಯಕರ ಬೆಂಬಲಿಗನಾಗದೇ, ಇಡೀ ಜಿಲ್ಲೆಯ ಕಾರ್ಯಕರ್ತರ ಬೆಂಬಲಿಗನಾಗಿರುತ್ತಾನೆ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಕೆ.ಆರ್.ಪೇಟೆಯಲ್ಲಿ ಮೊದಲ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಜು.28ಕ್ಕೆ ಮಳವಳ್ಳಿ, ಜು.29ಕ್ಕೆ ಮದ್ದೂರು, ಆ.4ರಂದು ಮಂಡ್ಯ, ಆ.5 ಶ್ರೀರಂಗಪಟ್ಟಣ, ಪಾಂಡವಪುರ ಆ.7ರಂದು ಸಭೆ ನಡೆಸಿ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಣೆ ಮಾಡಿ ರಾಜ್ಯ ಸಮಿತಿಗೆ ಶಿಫಾರಸ್ಸು ಮತ್ತು ವರದಿ ನೀಡಲಾಗುವುದು ಎಂದು ಎಐಸಿಸಿ ವೀಕ್ಷಕರಾದ ಸೈಮನ್ ಅಲೆಕ್ಸ್ ತಿಳಿಸಿದರು.
ಕೆಪಿಸಿಸಿ ವೀಕ್ಷಕರಾದ ಲಕ್ಷö್ಮಣ್ ಅವರು ಮಾತನಾಡಿ ಈ ಹಿಂದೆ ಜಿಲ್ಲಾಧ್ಯಕ್ಷರ ಆಯ್ಕೆ ಮಾಡುವಾಗ ಜಿಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡಲಾಗುತ್ತಿತ್ತು. ಇದರಿಂದ ಜಿಲ್ಲಾಧ್ಯಕ್ಷ ಪಕ್ಷ ಬದಲಾಯಿಸಿದರೆ ಇಡೀ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಪಕ್ಷ ತ್ಯಜಿಸುತ್ತಿದ್ದರು. ಈಗ ಕಾರ್ಯಕರ್ತರ ಮೂಲಕ ಆಯ್ಕೆ ಮಾಡಿದರೆ ಇಂತಹ ಪ್ರಮೇಯ ಇರುವುದಿಲ್ಲ. ಇದಕ್ಕೆ ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧೀ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖಂಡರ ಮೂಲಕ ಆಯ್ಕೆಗೆ ತಿಲಾಂಜಲಿ ನೀಡಿ ಪ್ರತಿ ತಾಲ್ಲೂಕಿನ ಸಾಮಾನ್ಯ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಹೆಚ್ಚು ಒಲವು ಯಾರಿಗೆ ಇದೆ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಇದರಿಂದ ಪಕ್ಷಕ್ಕೆ ನಿಷ್ಠರಾದವರ ಆಯ್ಕೆಯಾಗಲಿದೆ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ನೇರವಾಗಿ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿರುವುದರಿಂದ ಪಕ್ಷಕ್ಕೆ ಗಟ್ಟಿತನದಿಂದ ಕೂಡಿನ ಜಿಲ್ಲಾಧ್ಯಕ್ಷನ ಆಯ್ಕೆ ಸಾಧ್ಯವಾಗುತ್ತದೆ ಇದರಿಂದ ಪಕ್ಷ ಸಂಘಟನೆಗೆ ಅವಕಾಶವಾಗಲಿದೆ ಎಂದು ಬಿ.ನಾಗೇಂದ್ರಕುಮಾರ್ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಕೆಪಿಸಿಸಿ ವೀಕ್ಷಕರಾದ ಲಕ್ಷ್ಮಣ್, ಗೋಪಿಕೃಷ್ಣ, ನರೇಂದ್ರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್,
ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಭಾರತ್ ಜೋಡೋ ಸಂಚಾಲಕ ಸಿ.ಎಂ.ದ್ಯಾವಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಜಾನಾಯಕ್, ಎಐಸಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಚಾಲಕ ಶ್ಯಾಮ್ ಪ್ರಸಾದ್ ಕೆ.ಬಿ.ಮಹೇಶ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಕೆಯುಐಡಿಎಫ್ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಲ್ಲೂಕು ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ರಾಜಯ್ಯ, ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಮೀನಾಕ್ಷಿ ರಮೇಶ್, ತಾಲ್ಲುಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಿ ಜಗದೀಶ್, ಉಪಾಧ್ಯಕ್ಷೆ ವಿನೂತ ಸುರೇಶ್, ನೇತ್ರವತಿರಮೇಶ್, ಶಿವಮ್ಮ, ರೂಪಾ, ಲತಾ, ಎಸ್.ಐ.ಆರ್.ತಾಲ್ಲೂಕು ಸಂಯೋಜಕ ಆಕಾಶ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
