ಮೈಸೂರು, ಜು.28: ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಮತ್ತಷ್ಟು ಬಲ ತುಂಬಿದ ಮೈಸೂರು ಬಿಗ್ ಟೆಕ್ ಶೋ 2026 ಯಶಸ್ವಿಯಾಗಿ ಸಮಾರೋಪಗೊಂಡಿದೆ.
ದಿನಗಳ ಶೃಂಗಸಭೆಯಲ್ಲಿ 1,210ಕ್ಕೂ ಹೆಚ್ಚು ಪ್ರತಿನಿಧಿಗಳು, 250ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು, 105ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ತಜ್ಞ ವಕ್ತಾರರು, 6 ದೇಶಗಳ ಪಾಲುದಾರರು ಹಾಗೂ 40ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಿ, ಮೈಸೂರನ್ನು ರಾಜ್ಯದ ಮುಂದಿನ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಚರ್ಚೆಗಳು ನಡೆದವು.
ಸಮ್ಮೇಳನದಲ್ಲಿ ಬಿಡುಗಡೆಯಾದ ಕೆಡಿಇಎಂ–ಎಕ್ಸ್ಫೆನೋ ಪ್ರತಿಭಾ ವರದಿ ಪ್ರಕಾರ, ಮೈಸೂರಿನಲ್ಲಿ ಸುಮಾರು 3 ಲಕ್ಷ ವೈಟ್-ಕಾಲರ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ವಿವಿಧ ನಗರಗಳಿಂದ 44,500ಕ್ಕೂ ಹೆಚ್ಚು ವೃತ್ತಿಪರರು ಮೈಸೂರಿಗೆ ಸ್ಥಳಾಂತರಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಐಟಿ, ಜಿಸಿಸಿ, ಎಐ, ಸೆಮಿಕಂಡಕ್ಟರ್, ಸೈಬರ್ ಭದ್ರತೆ ಹಾಗೂ ಇಎಸ್ಡಿಎಂ ಕ್ಷೇತ್ರಗಳಲ್ಲಿ ನಗರವು ವೇಗವಾಗಿ ಬೆಳೆಯುತ್ತಿರುವುದನ್ನು ವರದಿ ಎತ್ತಿಹಿಡಿದಿದೆ.
ಇಎಸ್ಡಿಎಂ ವಲಯದಲ್ಲಿ ₹4,500 ಕೋಟಿ ಹೂಡಿಕೆ, 56 ಹೊಸ ಕಂಪನಿಗಳ ಆಗಮನ ಹಾಗೂ 3-4 ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ಸ್ಥಾಪನೆ ಮೈಸೂರಿನ ಕೈಗಾರಿಕಾ ಬೆಳವಣಿಗೆಗೆ ಹೊಸ ಚೈತನ್ಯ ನೀಡಿದೆ. 100ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಅರ್ಜಿಗಳು ಹಾಗೂ 11 ಹೂಡಿಕೆದಾರರ ಭಾಗವಹಿಸುವಿಕೆಯು ನಗರದ ಸ್ಟಾರ್ಟ್ಅಪ್ ಪರಿಸರದ ಮೇಲಿನ ವಿಶ್ವಾಸವನ್ನು ಪ್ರತಿಬಿಂಬಿಸಿದೆ.
ಸಮ್ಮೇಳನದಲ್ಲಿ ಜಾಗತಿಕ ಸೈಬರ್ ಸೆಕ್ಯುರಿಟಿ ಸ್ಕಿಲ್ ಗ್ಯಾಪ್ ವರದಿ, ಏಜೆಂಟಿಕ್ ಎಐ ಸೈಬರ್ ಸೆಕ್ಯುರಿಟಿ ಕೋರ್ಸ್, ಗ್ಲೋಬಲ್ ಟೆಕ್ನಾಲಜಿ ಸೆಂಟರ್ಗೆ ಆಸಕ್ತಿ ಪತ್ರ ವಿತರಣೆ ಹಾಗೂ ಎಸ್ಬಿಐ–ಕೆಡಿಇಎಂ ನಡುವಿನ ತಿಳುವಳಿಕಾ ಒಪ್ಪಂದ (MoU) ಪ್ರಮುಖ ಆಕರ್ಷಣೆಯಾಗಿದ್ದವು.
ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರು, “ಮೈಸೂರನ್ನು ಮುಂದಿನ ಐಟಿ ಸಿಟಿಯಾಗಿ ರೂಪಿಸಲು ಉದ್ಯಮ ವಲಯ ಹೆಚ್ಚಿನ ಸಹಕಾರ ನೀಡಬೇಕು” ಎಂದು ಕರೆ ನೀಡಿದರು.
ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು ಅವರು, ಸರ್ಕಾರದ ನೀತಿ ಬೆಂಬಲ, ಗುಣಮಟ್ಟದ ಮೂಲಸೌಕರ್ಯ ಹಾಗೂ ನಾವೀನ್ಯತೆಯ ವಾತಾವರಣದಿಂದ ಮೈಸೂರು ಜಾಗತಿಕ ಹೂಡಿಕೆದಾರರ ಗಮನ ಸೆಳೆಯುತ್ತಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಜಿಸಿಸಿ, ಎಐ, ಸೆಮಿಕಂಡಕ್ಟರ್, ಡಿಜಿಟಲ್ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಹಾಗೂ ಸ್ಟಾರ್ಟ್ಅಪ್ ಬೆಳವಣಿಗೆ ಕುರಿತ 20ಕ್ಕೂ ಹೆಚ್ಚು ತಾಂತ್ರಿಕ ಗೋಷ್ಠಿಗಳು ನಡೆದಿದ್ದು, ಮೈಸೂರು–ಮಂಡ್ಯ–ಚಾಮರಾಜನಗರವನ್ನು ಒಟ್ಟಾಗಿ ಹೊಸ ತಂತ್ರಜ್ಞಾನ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಮಹತ್ವದ ಕಾರ್ಯತಂತ್ರಗಳು ರೂಪಿಸಲಾಯಿತು.
