ಕೆ.ಆರ್.ಪೇಟೆ, ಜು.28: ಪಟ್ಟಣದ ಚನ್ನೇಗೌಡ ಕಾಂಪ್ಲೆಕ್ಸ್ ಎದುರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಭಿಮಾನಿಗಳ ಬಳಗ ಹಾಗೂ ಹೂವು-ಹಣ್ಣು ವ್ಯಾಪಾರಿಗಳ ಸಂಘದ ವತಿಯಿಂದ ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುವೆಂಪು ಗೆಳೆಯರ ಸೇವಾ ಟ್ರಸ್ಟ್ ಅಧ್ಯಕ್ಷ ಕೆಬಿಸಿ ಮಂಜುನಾಥ್, ಡಾ. ಕಲಾಂ ಅವರ ಸರಳ ಜೀವನ, ಶಿಸ್ತು, ವಿಜ್ಞಾನ ಸಾಧನೆ ಹಾಗೂ ದೇಶಸೇವೆಯನ್ನು ಸ್ಮರಿಸಿದರು. ಇಸ್ರೋ ಮತ್ತು ಡಿಆರ್ಡಿಒದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಅವರು ಎಸ್ಎಲ್ವಿ-3 ಯೋಜನೆ, ಅಗ್ನಿ, ಪೃಥ್ವಿ, ಆಕಾಶ್ ಮತ್ತು ತ್ರಿಶೂಲ್ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿ “ಮಿಸೈಲ್ ಮ್ಯಾನ್ ಆಫ್ ಇಂಡಿಯಾ” ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದು ಹೇಳಿದರು.
1998ರ ಪೋಖ್ರಾನ್–2 ಪರಮಾಣು ಪರೀಕ್ಷೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, 2002ರಿಂದ 2007ರವರೆಗೆ ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಾಜಕೀಯ ಹಿನ್ನೆಲೆಯಿಲ್ಲದೆ ರಾಷ್ಟ್ರಪತಿಯಾದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕಲಾಂ ಅವರು ವಿದ್ಯಾರ್ಥಿಗಳೊಂದಿಗೆ ಬೆರೆಯಲು ಇಷ್ಟಪಡುತ್ತಿದ್ದರು. “ಸಾಧನೆ ಮಾಡುವ ಕನಸು ಕಾಣಬೇಕು”, “ಸೋಲು ಎಂದರೆ ಮೊದಲ ಪ್ರಯತ್ನದಲ್ಲಿ ಕಲಿಯುವುದು”, “ಕಷ್ಟ ಕೊಡುವವರಿಗೆ ಧನ್ಯವಾದ ಹೇಳಿ, ಅವರು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತಾರೆ” ಎಂಬ ಅವರ ಜೀವನ ಸಂದೇಶಗಳು ಇಂದಿಗೂ ಯುವಜನತೆಗೆ ಸ್ಪೂರ್ತಿಯಾಗಿವೆ ಎಂದು ಮಂಜುನಾಥ್ ಹೇಳಿದರು.
2015ರ ಜುಲೈ 27ರಂದು ಶಿಲ್ಲಾಂಗ್ನ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ವೇಳೆ ಕಲಾಂ ಅವರು ಕುಸಿದು ಬಿದ್ದು ನಿಧನರಾದ ಘಟನೆಯನ್ನು ಸ್ಮರಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಗ್ರೋ ಪ್ರಕಾಶ್, ಷಣ್ಮುಗಂ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಭಾವಾಜಿ ಚಂದ್ರು, ಅಧ್ಯಕ್ಷ ಸೈಯದ್ ರೋಶನ್, ಕಾರ್ಯದರ್ಶಿ ಚಂದ್ರಶೇಖರ್, ಹೂವು ಹಾಗೂ ಹಣ್ಣು ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಮಂಜಮ್ಮ, ಚೇತನ್, ತೇಜ, ಲಕ್ಷ್ಮಿ, ವಿನೋದಮ್ಮ, ಊಚನಹಳ್ಳಿ ರಘು, ಆನಂದ್ ಕುಮಾರ್, ಜಗದೀಶ್, ಸೈಯದ್ ಮುಬಾರಕ್, ಇಂದ್ರಮ್ಮ, ಸಲಾವುದ್ದೀನ್, ಮುಸಾದಿಕ್, ನಜೀಬ್ ಉಲ್ಲಾ, ಸಾಧಿಕ್, ಸುಹೇಲ್, ಸಲ್ಮಾನ್, ಪ್ರಭು, ಮಣಿ, ಗಂಗಣ್ಣ, ಮಂಜಣ್ಣ, ಚಂದ್ರು, ಸೂರಿ, ರಿಯಾಜ್, ಸ್ನೇಕ್ ಮುನ್ನ, ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
