ಕೆ.ಆರ್.ಪೇಟೆ, ಜು.28: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದಲ್ಲಿ ಎಂಟು ಕುರಿಗಳನ್ನು ಬಲಿ ಪಡೆದಿದ್ದ ಚಿರತೆಯು ಅರಣ್ಯ ಇಲಾಖೆಯ ಅಧಿಕಾರಿಗಳು ಅಳವಡಿಸಿದ್ದ ಬೋನಿಗೆ ಸೆರೆಯಾಗಿದೆ.
ಭಾನುವಾರ ರಾತ್ರಿ ಚಿರತೆಯು ಏಕಾಏಕಿ ಕುರಿಗಳ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿ 8 ಕುರಿಗಳನ್ನು ಕೊಂದು, 5 ಕುರಿಗಳಿಗೆ ಗಂಭೀರ ಗಾಯಗೊಳಿಸಿತ್ತು. ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸಂಜೆ ಚಿರತೆ ಸೆರೆಗೆ ಬೋನು ಅಳವಡಿಸಿದ್ದರು. ಅಂತಿಮವಾಗಿ ಸೋಮವಾರ ರಾತ್ರಿ ಚಿರತೆಯು ಬೋನಿಗೆ ಬಿದ್ದಿದೆ.
ಚಿರತೆ ಸೆರೆಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ನಾಯಕನಹಳ್ಳಿ ಗ್ರಾಮಸ್ಥರು ಹಾಗೂ ರಾತ್ರಿ ವೇಳೆ ಜಮೀನುಗಳಿಗೆ ತೆರಳುತ್ತಿದ್ದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸೆರೆ ಸಿಕ್ಕಿರುವ ಚಿರತೆಗೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸೂಕ್ತ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಒ ಅನಿತಾ, ಡಿಆರ್ಎಫ್ಒ ಚೇತನ್, ಗಸ್ತು ಅರಣ್ಯ ಪಾಲಕ ಕೌಶಿಕ್, ಅಭಿಲಾಷ್ ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿಗಳಾದ ರಾಜೇಶ್, ನಿರಂಜನ್, ಬಾಬು, ರವಿಕುಮಾರ್ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
