ರಾಮನಾಥಪುರ, ಆಗಸ್ಟ್ 1: ಪಟ್ಟಣದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪರಿಸರ ಸಂರಕ್ಷಣೆ ಹಾಗೂ ಕಾವೇರಿ ನದಿಯ ಸ್ವಚ್ಛತೆಯನ್ನು ಕಾಪಾಡಲು ನಿಯಮ ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕಾಳಬೋಯಿ ಒತ್ತಾಯಿಸಿದರು.
ರಾಮನಾಥಪುರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ವತಿಯಿಂದ ಆಯೋಜಿಸಿದ್ದ 155ನೇ ಹುಣ್ಣಿಮೆ ಕಾವೇರಿ ಮಾತೆ ಮಹಾಆರತಿ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಲವು ಬಾರಿ ಜಾಗೃತಿ ಅಭಿಯಾನ, ಪತ್ರಿಕಾ ಪ್ರಕಟಣೆ ಹಾಗೂ ವಾಹನಗಳ ಮೂಲಕ ಪ್ರಚಾರ ನಡೆಸಿದರೂ ಕೆಲ ವ್ಯಾಪಾರಿಗಳು ಇನ್ನೂ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಯನ್ನು ಮುಂದುವರಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾವೇರಿ ನದಿ, ಪಟ್ಟಣದ ರಸ್ತೆ, ಚರಂಡಿ ಹಾಗೂ ದೇವಾಲಯಗಳ ಸುತ್ತಮುತ್ತ ಪರಿಸರ ಮಾಲಿನ್ಯ ಹೆಚ್ಚುತ್ತಿದ್ದು, ಪಟ್ಟಣದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆ ಚೀಲ ಮತ್ತು ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಂಗಡಿಗಳಲ್ಲಿ ನಿಯಮಿತವಾಗಿ ಪರಿಶೀಲನೆ ನಡೆಸಿ, ಪ್ಲಾಸ್ಟಿಕ್ ಮಾರಾಟ ಅಥವಾ ಬಳಕೆ ಕಂಡುಬಂದರೆ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಬೇಕು. ಅಗತ್ಯವಿದ್ದರೆ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಿ ಅಂಗಡಿಗಳನ್ನು ಮುಚ್ಚಿಸುವಂತಹ ಕಠಿಣ ಕ್ರಮಕ್ಕೂ ಮುಂದಾಗಬೇಕು ಎಂದು ಕಾಳಬೋಯಿ ಒತ್ತಾಯಿಸಿದರು.

ರಾಮನಾಥಪುರದಲ್ಲಿ ಕಳೆದ 15 ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರತಿ ಹುಣ್ಣಿಮೆ ದಿನ ಕಾವೇರಿ ನದಿ ದಂಡೆ, ದೇವಾಲಯಗಳ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ಬಳಿಕ ಕಾವೇರಿ ಮಾತೆಗೆ ಮಹಾಆರತಿ ಸಲ್ಲಿಸುವ ಸಂಪ್ರದಾಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಬಾರಿ ನಡೆದ 155ನೇ ಮಹಾಆರತಿ ಕಾರ್ಯಕ್ರಮದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ತಾಲ್ಲೂಕು ಅಧ್ಯಕ್ಷ ಸಿದ್ದರಾಜು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
