ತುಮಕೂರು : ನಮ್ಮ ಬೆಳವಣಿಗೆಗೆ ಸಹಕಾರಿ ಸಂಘಗಳು ಸಹಕಾರಿಯಾಗಿವೆ. ತಳಮಟ್ಟದ ಸಮುದಾಯಗಳು ಶ್ರೇಯೋಭಿವೃದ್ಧಿಗೆ, ನಮ್ಮ ಶಕ್ತಿ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಾಗಬೇಕು ಎಂದು ಮಾಜಿ ಸಹಕಾರ ಸಚಿವ, ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ನಗರದ ಕುಂಚಿಟಿಗರ ಸಮುದಾಯಭವನದಲ್ಲಿ ನಗರದ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಲ್ಲಿ ಪ್ರತಿಯೊಂದು ತಳಸಮುದಾಯದವರೂ ಸಹಕಾರ ಸಂಘ ಸ್ಥಾಪನೆ ಮಾಡಿದ್ದಾರೆ.ಸಣ್ಣಸಣ್ಣ ಸಮುದಾಯದವರಿಗೆ ಸಾಲ ಸೌಲಭ್ಯ ಸಿಗದ ಸಂದರ್ಭದಲ್ಲಿ ತಮ್ಮದೇ ಸಹಕಾರ ಸಂಘಗಳಲ್ಲಿ ಸಾಲ ಸೌಕರ್ಯ ಪಡೆದು ಬೆಳವಣಿಗೆ ಆಗಬಹುದು.ಖಾಸಗಿಯವರಿಂದ ದುಬಾರಿ ಬಡ್ಡಿ ತೆತ್ತು ಸಾಲ ಪಡೆಯುವುದು ತಪ್ಪಬೇಕು ಎಂದರು.
ಸಹಕಾರ ಸಂಸ್ಥೆಗಳ ಸಣ್ಣಪುಟ್ಟ ಲೋಪಗಳನ್ನೇ ದೊಡ್ಡದು ಮಾಡಿದ್ವೇಷ ಸಾಧಿಸದೆ, ಸರಿಪಡಿಸಿಕೊಂಡು ಸರಿದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು.ಎಷ್ಟೇ ಕಷ್ಟವಿದ್ದರೂ ನಿಮ್ಮ ಮಕ್ಕಳಿಗೆ ಉನ್ನಯ ಶಿಕ್ಷಣ ಕೊಡಿಸಿ, ಅವರನ್ನು ಸಮಾಜದ ಆಸ್ತಿಯನ್ನಾಗಿ ಮಾಡಿ, ಶಿಕ್ಷಣ ಪಡೆಯದವರು ಸಮಾಜಕ್ಕೆ ಹೊರೆಯಾಗುತ್ತಾರೆಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸಹಕಾರಿ ಸಂಘ-ಸಂಸ್ಥೆಗಳು ದೇಶದ ಪ್ರಗತಿಗೆ, ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂದ ಸರಳವಾಗಿ ಸಾಲ ಪಡೆಯುವುದು ಕಷ್ಟವಾಗಿರುವಾಗ ಸುಲಭವಾಗಿ ಸಾಲಸೌಲಭ್ಯ ಪಡೆದು ವ್ಯವಹಾರ ನಡೆಸಲು ಸಹಕಾರಿ ಸಂಘಗಳು ಸಹಕಾರಿಯಾಗಿವೆ ಎಂದರು.


ಕುರುಹಿನಶೆಟ್ಟಿ ಸಮಾಜದ ಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿ, ನೀಲಕಂಠೇಶ್ವರ ಸ್ವಾಮಿ ಸಹಕಾರ ಸಂಘವು ದೊಡ್ಡ ಪ್ರಮಾಣದಲ್ಲಿ ಬೆಳೆದು ಸಂಭ್ರಮದಿಂದ ಶತಮಾನೋತ್ಸವಆಚರಿಸುವಂತಾಗಲಿ, ಸಹಕಾರ ಸಂಘಗಳ ಮೂಲಕ ಆರ್ಥಿಕ ಚಟುವಟಿಕೆಗಳಲ್ಲದೆ, ಸಮಾಜದಲ್ಲಿ ಭಾವೈಕ್ಯತೆ ಬೆಳೆಯಲು ಸಾಧ್ಯವಾಗುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡುವುದುಉತ್ತಮ ಹವ್ಯಾಸ, ಅಂತಹವರನ್ನು ಪ್ರೋತಾಸಹಿಸಬೇಕು ಎಂದರು.
ಸಾನಿಧ್ಯವಹಿಸಿದ್ದ ರಾಮಕೃಷ್ಣ ವಿವೇಕಾನಂದಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹಾಲಿನಲ್ಲಿ ಜೇನು ಬೆರೆತಂತೆ ಕುರುಹಿನಶೆಟ್ಟಿ ಸಮುದಾಯವು ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬೆರೆಯುತ್ತಾರೆ.ಸಹಕಾರ ಸಂಘದ ಮೂಲಕ ಸಮಾಜದ ಬೆಳವಣಿಗೆಯಾಗಲಿ.ಗಟ್ಟಿತನದ ನಾಯಕರಾಗಿ ಕೆ.ಎನ್, ರಾಜಣ್ಣನವರು ಜಿಲ್ಲೆಯಲ್ಲಿ ಆಗಬೇಕಾದ ಕೆಲಸಗಳನ್ನು ಬಿಡದೆ ಮಾಡಿದ್ದಾರೆ.ಸಹಕಾರಿಕ್ಷೇತ್ರ ವ್ಯಾಪಕಗೊಳ್ಳಲು ಸಹಕಾರ ನೀಡಿದ್ದಾರೆ ಎಂದು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ನೀಲಕಂಠೇಶ್ವರ ಪತ್ತಿನ ಸಹಕಾರ ಸಂಘದಅಧ್ಯಕ್ಷ ಟಿ.ಹೆಚ್. ಶಿವಾನಂದ್ ಮಾತನಾಡಿ, 2001ರಲ್ಲಿ ಆರಂಭವಾದ ಸಂಘಕ್ಕೆ 25 ವರ್ಷತುಂಬಿದೆ. ಹಂತಹಂತವಾಗಿ ಪ್ರಗತಿ ಸಾಧಿಸುತ್ತಾ ಸಂಘ ಬೆಳವಣಿಗೆ ಕಂಡಿದೆ. 11 ಲಕ್ಷ ಷೇರು ಮೊತ್ತ ಹಾಗೂ 31 ಲಕ್ಷರೂ.ಪ್ರಾಥಮಿಕ ಬಂಡವಾಳದಿಂದ ಸಂಘ ಆರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದು ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು.
ಆರ್.ಹೆಚ್. ನಾಗಭೂಷಣ್, ವೀರೇಂದ್ರ, ಎಂ.ಪಿ. ಶಿವಕುಮಾರ್, ಕೆ.ಹೆಚ್. ನಾರಾಯಣ್, ಕೆ.ಸಿ.ಕೃಷ್ಣಶೆಟ್ಟಿ, ಎಸ್.ಎನ್, ಬಸವರಾಜು, ನಿರ್ದೇಶಕರಾದ ಬಿ.ಎನ್.ಜಯಚಂದ್ರ, ಬಿ.ಎಲ್. ಗೋವಿಂದಶೆಟ್ಟಿ, ಎನ್.ಎಸ್. ಕೃಷ್ಣಮೂರ್ತಿ, ಟಿ.ಆರ್.ದಿನೇಶ್ಕುಮಾರ್, ಎಸ್.ಎಸ್. ಸೋಮಶೇಖರ್, ಟಿ.ಪಿ.ಜಗದೀಶ್, ಟಿ.ಆರ್. ಮುಕ್ತಾಂಭ, ಯಶೋಧ, ಕಮಲ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
