ಹೊಳೆನರಸೀಪುರ, ಆ. 4: ಪ್ರಾಮಾಣಿಕ, ನೈತಿಕ ಹಾಗೂ ಸಮಾಜಮುಖಿ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಶಕ್ತಿ ಎಂದು ವಿವಿಧ ಗಣ್ಯರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹೊಳೆನರಸೀಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕಿನ ಕಟ್ಟೆಬೆಳಗುಲಿಯ ಶ್ರೀರಾಮದೇವರ ಅಣೆಕಟ್ಟಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯಗಳು ವ್ಯಕ್ತವಾದವು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ತಮ್ಮ ಮೂರು ದಶಕಗಳ ಶಾಸಕ ಜೀವನದಲ್ಲಿ ಪತ್ರಕರ್ತರ ರಚನಾತ್ಮಕ ಸಲಹೆಗಳು ಹಾಗೂ ವಿಮರ್ಶೆಗಳು ಜನಸೇವೆಗೆ ಮಾರ್ಗದರ್ಶನ ನೀಡಿವೆ ಎಂದು ಹೇಳಿದರು. ಹಾಸನ ಜಿಲ್ಲೆಯ ಅಭಿವೃದ್ಧಿಗೆ ಪತ್ರಿಕಾರಂಗದ ಕೊಡುಗೆ ಮಹತ್ವದ್ದಾಗಿದ್ದು, ಹೊಳೆನರಸೀಪುರದಲ್ಲಿ ಪತ್ರಕರ್ತರಿಗಾಗಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅರಕಲಗೂಡು ಶಾಸಕ ಎ. ಮಂಜು ಮಾತನಾಡಿ, ಪತ್ರಿಕಾರಂಗವು ಸಮಾಜದ ಕನ್ನಡಿಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತಂದು ನ್ಯಾಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪತ್ರಕರ್ತರು ಪರಸ್ಪರ ಒಗ್ಗಟ್ಟಿನಿಂದ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಹೊಳೆನರಸೀಪುರದಲ್ಲಿ ಪತ್ರಕರ್ತರ ಭವನ ಹಾಗೂ ಕಚೇರಿ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಇದೇ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತ ರಾಧಾಕೃಷ್ಣ ಅವರಿಗೆ ಸಂಘದ ವತಿಯಿಂದ ₹10,000 ಆರ್ಥಿಕ ನೆರವು ಘೋಷಿಸಿ, ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಸಂಘ ಸದಾ ಬದ್ಧವಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಆರ್. ಕೆಂಚೇಗೌಡ ಮಾತನಾಡಿ, ಪತ್ರಕರ್ತರ ಹೆಸರಿನಲ್ಲಿ ಬ್ಲ್ಯಾಕ್ಮೇಲ್, ಹಣ ವಸೂಲಿ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾ ದಿನಾಚರಣೆ ಆತ್ಮಾವಲೋಕನದ ದಿನವಾಗಿದ್ದು, ಸಮಾಜದ ವಿಶ್ವಾಸ ಉಳಿಸುವ ನೈತಿಕ ಪತ್ರಿಕೋದ್ಯಮಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಮದನಗೌಡ ಮಾತನಾಡಿ, ಯೂಟ್ಯೂಬ್, ಸಾಮಾಜಿಕ ಜಾಲತಾಣ ಹಾಗೂ ಆರ್ಟಿಐ ಹೆಸರಿನಲ್ಲಿ ಕೆಲವರು ಪತ್ರಕರ್ತರಂತೆ ವರ್ತಿಸಿ ಅಧಿಕಾರಿಗಳಿಗೆ ಅನಗತ್ಯ ಒತ್ತಡ ಹೇರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸುಳ್ಳು ಸುದ್ದಿಗಳು ಹಾಗೂ ಸೆಟಲ್ಮೆಂಟ್ ಪತ್ರಿಕೋದ್ಯಮಕ್ಕೆ ಅವಕಾಶ ನೀಡಬಾರದು. ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ವಿ.ಎಂ. ರೇಣುಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್.ಎಸ್. ಪುಟ್ಟಸೋಮಪ್ಪ, ಹೆಚ್.ವೈ. ಚಂದ್ರಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಹಿರಿಯ ಪತ್ರಕರ್ತರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಡಾ. ಅಶ್ವಿನಿ ಅವರು ಭರತನಾಟ್ಯದ ಸ್ವಾಗತ ನೃತ್ಯ ಪ್ರದರ್ಶಿಸಿದರು. ದಿವ್ಯ ಧನುಶ್ರೀ ಪ್ರಾರ್ಥನೆ ಸಲ್ಲಿಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಜಿಲ್ಲಾ ಸಂಘದ ಕಾರ್ಯದರ್ಶಿಗಳಾದ ಬಿ.ಆರ್. ಬೊಮ್ಮೇಗೌಡ ಹಾಗೂ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
