ರಾಮನಾಥಪುರ, ಆ. 4: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಾಗೂ ವಿಲೀನದ ಪರಿಸ್ಥಿತಿ ಎದುರಾಗುತ್ತಿರುವ ಸಂದರ್ಭದಲ್ಲಿ, ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಆರಂಭವಾಗಿರುವ ‘ಮಕ್ಕಳ ಮನೆ’ ಯೋಜನೆ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಶಾಕಿರಣವಾಗಿ ಮೂಡಿಬಂದಿದೆ.
ಗ್ರಾಮೀಣ ಬಡ ಹಾಗೂ ರೈತ ಕುಟುಂಬಗಳ ಮಕ್ಕಳಿಗೂ ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ಸಮಾನ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ 2023ರ ನವೆಂಬರ್ 1ರಂದು ಹನ್ಯಾಳು ಸರ್ಕಾರಿ ಶಾಲೆಯಲ್ಲಿ ಆರಂಭವಾದ ಈ ಯೋಜನೆ, ಇಂದು 20 ಕೇಂದ್ರಗಳಿಗೆ ವಿಸ್ತರಿಸಿ 600ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.
ಈ ಶೈಕ್ಷಣಿಕ ಉಪಕ್ರಮಕ್ಕೆ ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾ ಎ. ಮಂಜು ಅವರ ಮಾರ್ಗದರ್ಶನ ಹಾಗೂ ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯದ ಮುಖಂಡರು ಮತ್ತು ಗ್ರಾಮಸ್ಥರ ಸಹಕಾರ ದೊರೆತಿದೆ. ಯೋಜನೆಯ ಪರಿಕಲ್ಪನೆಯನ್ನು ಅರಕಲಗೂಡು ತಾಲ್ಲೂಕು ಪಂಚಾಯಿತಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ಹನ್ಯಾಳು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ.

ಗ್ರಾಮೀಣ ಶಿಕ್ಷಣಕ್ಕೆ ಹೊಸ ದಿಕ್ಕು
‘ಮಕ್ಕಳ ಮನೆ’ಯಲ್ಲಿ ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಆಟದ ಮೂಲಕ ಕಲಿಕೆ, ಚಟುವಟಿಕೆ ಆಧಾರಿತ ಬೋಧನೆ, ಫೋನಿಕ್ಸ್, ಕಥೆ ಹೇಳುವಿಕೆ, ಸಂಗೀತ, ಕಲೆ-ಕರಕುಶಲ, ಯೋಗ, ಜೀವನ ಕೌಶಲ್ಯ ಹಾಗೂ ಅನುಭವಾತ್ಮಕ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಮಾಂಟೆಸ್ಸರಿ ಪದ್ಧತಿ ಹಾಗೂ ಆಧುನಿಕ ಕಲಿಕಾ ಸಾಮಗ್ರಿಗಳ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲ್ಯ, ಸೃಜನಶೀಲತೆ ಮತ್ತು ಶಾಲಾ ಸಿದ್ಧತೆಯನ್ನು ಬೆಳೆಸಲಾಗುತ್ತಿದೆ.

ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ನೆರವು
ಗ್ರಾಮಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಲಭ್ಯವಾಗುತ್ತಿರುವುದರಿಂದ ಮಕ್ಕಳನ್ನು ದೂರದ ಖಾಸಗಿ ಶಾಲೆಗಳಿಗೆ ಕಳುಹಿಸುವ ಅವಶ್ಯಕತೆ ಕಡಿಮೆಯಾಗಿದೆ. ಇದರಿಂದ ಶಾಲಾ ಶುಲ್ಕ, ಸಾರಿಗೆ ಮತ್ತು ಇತರ ವೆಚ್ಚಗಳಲ್ಲಿ ಗ್ರಾಮೀಣ ಕುಟುಂಬಗಳಿಗೆ ₹2 ಕೋಟಿಗೂ ಅಧಿಕ ಉಳಿತಾಯ ಆಗಿದೆ ಎಂದು ಅಂದಾಜಿಸಲಾಗಿದೆ.

20 ಕೇಂದ್ರಗಳಲ್ಲಿ ಕಾರ್ಯಾಚರಣೆ
ಪ್ರಸ್ತುತ ಹನ್ಯಾಳು, ಕೋಟೆ ಅರಕಲಗೂಡು, ಮಧುರನಹಳ್ಳಿ, ಹಂದ್ರಂಗಿ, ಓಡನಹಳ್ಳಿ, ಸಂತೇಮರೂರು, ಬೈಚನಹಳ್ಳಿ, ಲಕ್ಕೂರು, ಮಲ್ಲಿಪಟ್ಟಣ, ಬಿದರಕ್ಕ, ಹುಲಿಕಲ್, ರಾಮನಾಥಪುರ, ಕೇರಳಾಪುರ, ಕಾಳೇನಹಳ್ಳಿ, ಶ್ರಾವಣೂರು, ಕಟ್ಟೇಪುರ, ದೊಡ್ಡಬೆಮ್ಮತ್ತಿ, ಹೊನ್ನೇನಹಳ್ಳಿ, ಬೋರೇಕೊಪ್ಪಲು ಹಾಗೂ ದೊಡ್ಡಮಗ್ಗೆ ಸೇರಿದಂತೆ 20 ಕೇಂದ್ರಗಳಲ್ಲಿ ‘ಮಕ್ಕಳ ಮನೆ’ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

CSR ಸಹಭಾಗಿತ್ವಕ್ಕೆ ಆಹ್ವಾನ
ಯೋಜನೆಯನ್ನು ಇನ್ನಷ್ಟು ಗ್ರಾಮಗಳಿಗೆ ವಿಸ್ತರಿಸುವ ಉದ್ದೇಶದಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಸಂಸ್ಥೆಗಳ ಸಹಭಾಗಿತ್ವ ಕೋರಲಾಗಿದೆ. ಮಕ್ಕಳ ಸ್ನೇಹಿ ತರಗತಿಗಳು, ಡಿಜಿಟಲ್ ಶಿಕ್ಷಣ, ಮಾಂಟೆಸ್ಸರಿ ಸಾಮಗ್ರಿಗಳು, ಶಿಕ್ಷಕರ ತರಬೇತಿ, ಗ್ರಂಥಾಲಯ ಹಾಗೂ ಆರೋಗ್ಯ-ಪೌಷ್ಟಿಕತಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ.
‘ಮಕ್ಕಳ ಮನೆ’ ಕೇವಲ ಪೂರ್ವ ಪ್ರಾಥಮಿಕ ಶಿಕ್ಷಣ ಯೋಜನೆಯಲ್ಲ; ಗ್ರಾಮೀಣ ಮಕ್ಕಳಿಗೆ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವ ಸಾಮಾಜಿಕ ಚಳವಳಿಯಾಗಿದೆ. ಒಂದು ಸರ್ಕಾರಿ ಶಾಲೆಯಲ್ಲಿ ಆರಂಭವಾದ ಈ ಪ್ರಯತ್ನ ಇಂದು ನೂರಾರು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ರಾಜ್ಯದ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗುವ ನಿರೀಕ್ಷೆ ಮೂಡಿಸಿದೆ.
