ಶ್ಲೋಕ – 25
ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ ।
ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ ॥೨೫॥
ಮಾನ ಅಪಮಾನಯೋಃ ತುಲ್ಯಃ ತುಲ್ಯಃ ಮಿತ್ರ ಅರಿ ಪಕ್ಷಯೋಃ ।
ಸರ್ವಾರಂಭ ಪರಿತ್ಯಾಗೀ ಗುಣಾತೀತಃ ಸ ಉಚ್ಯತೇ — ಸಮ್ಮಾನವೂ ಒಂದೆ; ಅಪಮಾನವೂ ಒಂದೆ. ಗೆಳೆಯರ ಬಳಗವೂ ಒಂದೆ; ಹಗೆಯರ ಬಳಗವೂ ಒಂದೆ. ಅವನು ಇಂಥ ಯಾವ ಲೌಕಿಕದಲ್ಲೂ ತೊಡಗಿಕೊಳ್ಳುವುದಿಲ್ಲ. ಅಂಥವನು ‘ಗುಣಾತೀತ’ ಎನ್ನಿಸುತ್ತಾನೆ.
ತ್ರಿಗುಣಾತೀತರನ್ನು ಒಬ್ಬರು ‘ಮಹಾನ್ ಜ್ಞಾನಿ’ ಎಂದು ಸಮ್ಮಾನಿಸಿ ಮಾತನಾಡಬಹುದು, ಇನ್ನೊಬ್ಬರು ಆತ ‘ಅರೆಹುಚ್ಚ’ ಎಂದು ನಿಂದಿಸಬಹುದು. ಆದರೆ ಇದ್ಯಾವುದೂ ಅವರ ಮೇಲೆ ಪರಿಣಾಮಬೀರದು. ಇವರಿಗೆ ಸ್ನೇಹಿತರು ಎನ್ನುವ ಮೋಹವಾಗಲಿ, ಶತ್ರುಗಳು ಎನ್ನುವ ದ್ವೇಷವಾಗಲಿ ಇರುವುದಿಲ್ಲ. ಇವರು ಎಲ್ಲರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾಣುತ್ತ, ಭಗವಂತನ ಭಕ್ತಿಗೆ ವಿರುದ್ಧವಾದ ಯಾವ ಚಟುವಟಿಕೆಯಲ್ಲೂ ತೊಡಗದೆ ಬದುಕುತ್ತಾರೆ. ಇವರು ದೀರ್ಘಕಾಲದ ಯಾವುದೇ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಿಲ್ಲ.
ಹೀಗೆ ಮೇಲಿನ ನಾಲ್ಕು ಶ್ಲೋಕದಲ್ಲಿ ಹೇಳಿದ ಎಲ್ಲ ಸ್ವಭಾವವುಳ್ಳವರು ಗುಣಾತೀತರೆನಿಸುತ್ತಾರೆ.
