ಹಾಸನ, ಆ. 6: ರೋಟರಿ ಕ್ಲಬ್ ಆಫ್ ಹಾಸನ ಸನ್ ರೈಸ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ, ಮೊಸಳೆಹೊಸಹಳ್ಳಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಚೈತ್ರ ಬಿ.ವಿ. ಅವರು ಎದೆಹಾಲಿನ ಮಹತ್ವ, ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸ್ತನ್ಯಪಾನದ ಪ್ರಯೋಜನಗಳು, ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಎದೆಹಾಲಿನ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಗರ್ಭಿಣಿಯರು ಹಾಗೂ ತಾಯಂದಿರಿಗೆ ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಆರೋಗ್ಯ ಅರಿವು ಪಡೆದುಕೊಂಡರು.
ರೋಟರಿ ಕ್ಲಬ್ ಆಫ್ ಹಾಸನ ಸನ್ ರೈಸ್ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ನಿರಂತರವಾಗಿ ನಡೆಸುತ್ತಿದ್ದು, ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಮೊಸಳೆಹೊಸಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದ್ದು, ಡಾ. ಚೈತ್ರ ಅವರ ನೇತೃತ್ವದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಫಲಾನುಭವಿಗಳಿಗೆ ಹಣ್ಣುಗಳು ಹಾಗೂ ಚಿಕ್ಕಿ ವಿತರಿಸಲಾಯಿತು. ಅಲ್ಲದೆ ವೈದ್ಯರಾದ ಡಾ. ಚೈತ್ರ ಬಿ.ವಿ. ಮತ್ತು ಡಾ. ದಿವ್ಯಶ್ರೀ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಜಂಟಿ ಕಾರ್ಯದರ್ಶಿ ರೋ. ಎಸ್.ಸಿ. ರಾಜೇಶ್, ರೋ. ಸುಬ್ರಮಣ್ಯ, ರೋ. ಚಂದ್ರೇಗೌಡ ಸೇರಿದಂತೆ ಕ್ಲಬ್ನ ಸದಸ್ಯರು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
