ತುಮಕೂರು, ಆ. 6: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಅವರು ನಗರದ ಅಸಹಾಯಕ, ಒಬ್ಬಂಟಿ ಹಾಗೂ ವಿಕಲಚೇತನ ಬ್ರಾಹ್ಮಣ ಸಮುದಾಯದ ಮಹಿಳೆ ಹಂಸಮಾಲಿನಿ ಅವರನ್ನು ದತ್ತು ಸ್ವೀಕರಿಸಿ, ಅವರ ಜೀವಿತಾವಧಿಯ ಆರೋಗ್ಯ, ಆರೈಕೆ ಹಾಗೂ ಜೀವನ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ವಹಿಸಿಕೊಳ್ಳುವುದಾಗಿ ಘೋಷಿಸಿದರು.
ಇತ್ತೀಚೆಗೆ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ಹಾಗೂ ಜಿಲ್ಲಾ ಸೇವಾದಳ ಸಮಿತಿ ಅಧ್ಯಕ್ಷರಾಗಿದ್ದ ಶಿವಪ್ರಸಾದ್ ನಿಧನರಾಗಿದ್ದರು. ಅವರ ಸಹೋದರಿ ಹಂಸಮಾಲಿನಿ ಅವರಿಗೆ ಶಿವಪ್ರಸಾದ್ ಅವರೇ ಆಸರೆಯಾಗಿದ್ದರು. ಅವರ ನಿಧನದಿಂದ ಸಂಕಷ್ಟಕ್ಕೆ ಸಿಲುಕಿದ ಹಂಸಮಾಲಿನಿ ಅವರಿಗೆ ಸಹೋದರನ ಸ್ಥಾನದಲ್ಲಿ ನಿಂತು ನೆರವಾಗುವ ಸಂಕಲ್ಪ ಮಾಡಿರುವುದಾಗಿ ಇಕ್ಬಾಲ್ ಅಹಮದ್ ತಿಳಿಸಿದರು.
ಈ ವೇಳೆ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿ ಇರುವುದರಿಂದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದೆ, ಸಮಾಜಸೇವೆಯ ಮೂಲಕ ಆಚರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅದಕ್ಕೆ ಸ್ಪಂದಿಸಿ ಈ ಸೇವಾ ಕಾರ್ಯ ಕೈಗೊಂಡಿರುವುದಾಗಿ ಹೇಳಿದರು.

“ಸಮಾಜದಲ್ಲಿ ಜಾತಿ, ಧರ್ಮದ ಭೇದಭಾವಕ್ಕಿಂತ ಮಾನವೀಯತೆ ದೊಡ್ಡದು. ಮನುಷ್ಯನ ಸಂಕಷ್ಟದ ಸಮಯದಲ್ಲಿ ನೆರವಾಗುವುದೇ ನಿಜವಾದ ಧರ್ಮ” ಎಂದು ಅವರು ಹೇಳಿದರು.
ಶಿವಪ್ರಸಾದ್ ಅವರ ನಿಧನದ ನಂತರ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದ ಬಳಿಕ, ಮುಸ್ಲಿಂ ಸಮುದಾಯದ ಅಮ್ಜದ್ ಅವರು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ನೆರವೇರಿಸಿದ್ದು, ಇದು ಮಾನವೀಯತೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಇಕ್ಬಾಲ್ ಅಹಮದ್ ಹೇಳಿದರು.
ಡಿಸಿಎಂ ಪರಮೇಶ್ವರ್ ಅವರ ಹುಟ್ಟುಹಬ್ಬದ ಅಂಗವಾಗಿ ಅಸಹಾಯಕ ಕುಟುಂಬಕ್ಕೆ ತಳ್ಳುವ ಗಾಡಿ ವಿತರಿಸಿ, ವ್ಯಾಪಾರ ಆರಂಭಿಸಲು ಮೂಲ ಬಂಡವಾಳ ಒದಗಿಸಲಾಯಿತು. ಅಲ್ಲದೆ ನಗರದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಅನ್ನದಾನ ಸೇರಿದಂತೆ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಷಣ್ಮುಖಪ್ಪ, ರೇವಣಸಿದ್ಧಯ್ಯ, ಸಿದ್ಧಲಿಂಗೇಗೌಡ, ಬೈಲಪ್ಪ, ಶಿವಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಫೀರ್, ರಮೇಶ್, ಅಸ್ಲಾಂ ಖಾನ್, ಆಲಂ, ರಾಮಯ್ಯ, ಚಕ್ರವರ್ತಿ ಪ್ರಕಾಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದು, ಇಕ್ಬಾಲ್ ಅಹಮದ್ ಅವರ ಸಮಾಜಸೇವಾ ಕಾರ್ಯವನ್ನು ಶ್ಲಾಘಿಸಿದರು.
– ಚಂದ್ರಚೂಡ ಕೆ.ಬಿ
