ಕೆ.ಆರ್.ಪೇಟೆ: ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ಸಾಗಿದರೆ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯುವ ಜೊತೆಗೆ ಕೈಹಿಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಲು ಕೂಡ ಸಾಧ್ಯವಿದೆ ಎಂದು ಸಂಸ್ಕೃತಿ ಸಂಘಟಕ ಡಾ. ಶ್ರೀನಿವಾಸ ರಾಘವನ್ ಹೇಳಿದರು.
ಅವರು ಇಂದು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವರಹನಾಥ ಕಲ್ಲಹಳ್ಳಿಯಲ್ಲಿ ನೆಲೆಸಿರುವ ಭೂದೇವಿ ಸಮೇತ ಶ್ರೀಲಕ್ಷ್ಮಿ ವರಹನಾಥಸ್ವಾಮಿಯ 17ಅಡಿ ಎತ್ತರದ ಶಿಲಾಮೂರ್ತಿಗೆ ರೇವತಿ ನಕ್ಷತ್ರದ ಶುಭ ದಿನವಾದ ಇಂದು ಅಭಿಷೇಕ ಮಾಡಿ, ಪುಷ್ಪಾಭಿಷೇಕ ನೆರವೇರಿಸಿ, ಪಟ್ಟಾಭಿಷೇಕ ಮಾಡಿ, ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿ ನೆರೆದಿದ್ದ ಭಕ್ತ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಯಾಂತ್ರಿಕವಾದ ಒತ್ತಡದ ಜೀವನದಲ್ಲಿ ಮಾನವರಾದ ನಾವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲು ದೇವರು ಮತ್ತು ಧರ್ಮದ ಮಾರ್ಗವನ್ನು ಅನುಸರಿಸುವುದು ಅಗತ್ಯವಾಗಿದೆ.

ದೇವಾಲಯಗಳಿಗೆ ತೆರಳಿ ಭಗವಂತನನ್ನು ಏಕಾಗ್ರತೆಯಿಂದ ಪ್ರಾರ್ಥಿಸಿದರೆ ಮಾನಸಿಕ ಒತ್ತಡಗಳು ದೂರಾಗುವ ಜೊತೆಗೆ ಮನಸ್ಸಿಗೆ ಶಾಂತಿ ನೆಮ್ಮದಿ ನೆಲೆಸಿ ಕೈ ಹಿಡಿದ ಕಾರ್ಯದಲ್ಲಿ ಯಶಸ್ಸನ್ನು ಕೂಡ ಹೊಂದಬಹುದಾಗಿದೆ ಆದ್ದರಿಂದ ಮಾನವರಾದ ನಾವು ಸಾಧನೆ ಮಾಡಲು ಕಷ್ಟವಾದರೂ ನ್ಯಾಯನೀತಿ ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಗುರಿ ಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮನಸಿದ್ದಲ್ಲಿ ಮಾರ್ಗ ಇರುವುದರಿಂದ ಜೀವನದಲ್ಲಿ ಎದುರಾಗುವ ಸೋಲು ಮತ್ತು ಅಮಾನಗಳಿಗೆ ಹೆದರಿ ಪಲಾಯನ ವಾದವನ್ನು ಅನುಸರಿಸದೇ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಬೇಕು ಎಂದು ಕಿವಿಮಾತು ಹೇಳಿದ ಶ್ರೀನಿವಾಸರಾಗವನ್ ಸ್ವಾರ್ಥವೇ ತುಂಬಿರುವ ಹಿಂದಿನ ಸಮಾಜದಲ್ಲಿ ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸಮಾಜದಲ್ಲಿ ವಾಸಿಸುವ ಬಡವರು ಹಾಗೂ ತುಳಿತಕ್ಕೊಳಗಾದ ಜನರಿಗೆ ಉಳ್ಳವರು ಕೈಲಾದ ಸಹಾಯ ಮಾಡುವ ಮೂಲಕ ಕಡುಬಡವರು ಹಾಗೂ ನಿರ್ಗತಿಕರ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ರೇವತಿ ನಕ್ಷತ್ರದ ಶುಭ ದಿನವಾದ ಇಂದು ಭಗವಂತನಾದ ಹರಿಯು ದುಷ್ಟನಾದ ಹಿರಣ್ಯಾಕ್ಷನನ್ನು ಸಂಹರಿಸಲು ವರಹಾವತಾರ ವನ್ನು ತಾಳಿ, ರಸಾತಳದಲ್ಲಿ ಬಂಧಿಸಿಟ್ಟಿದ್ದ ಭೂದೇವಿಯನ್ನು ಬಂಧನದಿಂದ ಬಿಡಿಸಿ ಮರಳಿ ಸ್ವಸ್ತಾನಕ್ಕೆ ಸೇರಿಸಿದ ಶುಭ ಗಳಿಗೆಯೇ ರೇವತಿ ನಕ್ಷತ್ರವಾದ್ದರಿಂದ ಇಂದು ಭಗವಂತನಾದ ವರಾಹ ಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು 500 ಲೀಟರ್ ಎಳನೀರು 500 ಲೀಟರ್ ಕಬ್ಬಿನ ಹಾಲು , ಅರಿಶಿನ ಚಂದನ ಹಸುವಿನ ತುಪ್ಪ ಜೇನುತುಪ್ಪ ಸುಗಂಧ ದ್ರವ್ಯಗಳು ಹಾಗೂ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಪವಿತ್ರ ಪತ್ರೆಗಳು ದವನ, ಕಮಲ ಹಾಗೂ ಸಂಪಿಗೆ, ತುಳಸಿಯಿಂದ ಅಭಿಷೇಕ ಮಾಡಿ ಪಟ್ಟಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿ, ಶ್ರೀನಿವಾಸ ಕಲ್ಯಾಣೋತ್ಸವ ನಡೆಸಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರೇವತಿ ನಕ್ಷತ್ರದ ಇಂದಿನ ಅಭಿಷೇಕ ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು ದಂಪತಿಗಳು, ರಾಜ್ಯದ ಮಾಜಿ ಸಚಿವರಾದ ನಾರಾಯಣಗೌಡ ದಂಪತಿಗಳು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಉದ್ಯಮಿ ಹಾಗೂ ಸಮಾಜ ಸೇವಕರಾದ ಸಾಯಿ ಟ್ರ್ಯಾಕ್ಟರ್ಸ್ ರವೀಂದ್ರ, ಎಂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲುರವಿ, ಮಡುವಿನಕೋಡಿ ಹರೀಶ್, ಸಮಾಜಸೇವಕ ಹಾಗೂ ರಾಜ್ಯ ಆರ್ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶ್ವದಲ್ಲಿಯೇ ಅಪರೂಪದ ಆಗಿರುವ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಬೃಹತ್ ಆಕಾರದ ಭೂದೇವಿ ಸಮೇತ ಶ್ರೀಲಕ್ಷ್ಮಿ ವರಹನಾಥ ಸ್ವಾಮಿಯ ಮೂರ್ತಿಗೆ ನಡೆಸಿದ ವಿಶೇಷ ಅಭಿಷೇಕವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ರೇವತಿ ನಕ್ಷತ್ರದ ಅಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು.
– ಶ್ರೀನಿವಾಸ್ ಆರ್.
