ರಾಮನಾಥಪುರ: ಇಲ್ಲಿನ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ಸೆ. 27ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾವೇರಿ ಮಾತೆಗೆ ವಿಶೇಷ ಪೂಜೆ ಹಾಗೂ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ತಿಳಿಸಿದರು.

ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ಸನ್ಯಾಸಿ ಸಂಘ, ಕೊಡಗು ಮತ್ತು ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆ ನಡೆಯಲಿದೆ ಎಂದರು.
ಕಾವೇರಿ ನದಿಯು ಹಲವು ಕಾರಣಗಳಿಂದ ಕಲುಷಿತಗೊಳ್ಳುತ್ತಿದ್ದು, ಜಲಮೂಲಗಳು ಬರಡಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಶ್ರೀ ಕ್ಷೇತ್ರ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ವರೆಗೆ ಜಾಗೃತಿ ಯಾತ್ರೆ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠದ ಮಠಾಧೀಶರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮಾರ್ಗದರ್ಶಕರಾದ ಶ್ರೀ ಸದಾಶಿವ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಹಾಗೂ ಸಾಧು-ಸಂತರ ನೇತೃತ್ವದಲ್ಲಿ ಈ ಜಾಗೃತಿ ಯಾತ್ರೆ ನಡೆಯಲಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸಾಧು-ಸಂತರು ಹಾಗೂ ಕಾರ್ಯಕರ್ತರ ತಂಡ ಸುಮಾರು ಒಂದು ತಿಂಗಳ ಕಾಲ ಕಾವೇರಿ ನದಿ ತಟದಲ್ಲಿ ಸಂಚರಿಸಿ ನದಿಯ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ ಎಂದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, 16ನೇ ವರ್ಷದ ಕಾವೇರಿ ಜಾಗೃತಿ ಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಬಳಿಕ ಕಾವೇರಿ ನದಿ ತಟದ ವಿವಿಧ ಪ್ರದೇಶಗಳಲ್ಲಿ ಆರತಿ, ಜಾಗೃತಿ ಕಾರ್ಯಕ್ರಮಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನದಿ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾವೇರಿ ನದಿ ಮಲಿನಗೊಳ್ಳುವುದನ್ನು ತಡೆಯಲು ಸರ್ಕಾರ ರೂಪಿಸಿರುವ ಒಳಚರಂಡಿ ಯೋಜನೆಗಳನ್ನು ತಕ್ಷಣ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕು. ಸ್ವಚ್ಛ ಕಾವೇರಿಗಾಗಿ ‘ನಮಾಮಿ ಗಂಗೆ’ ಮಾದರಿಯಲ್ಲಿ ‘ನಮಾಮಿ ಕಾವೇರಿ’ ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಸೇರಿದಂತೆ ಕಾವೇರಿ ನದಿ ಹರಿಯುವ ಹಲವು ಪ್ರದೇಶಗಳಲ್ಲಿ ಮಹಾ ಆರತಿ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರಿಗೆ ನದಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಗುವುದು. ನವೆಂಬರ್ 18ರಂದು ತಮಿಳುನಾಡಿನ ಕಾವೇರಿ ನದಿ ಬಂಗಾಳ ಕೊಲ್ಲಿ ಸಮುದ್ರ ಸಂಗಮ ಸ್ಥಳದಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಕಾವೇರಿ ಪವಿತ್ರ ತೀರ್ಥ ವಿಸರ್ಜನೆ ಸಮಾರಂಭ ನಡೆಯಲಿದೆ ಎಂದು ಚಂದ್ರಮೋಹನ್ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಯ ಗಡಿ ಗುರುತು ಕಾರ್ಯ ನಡೆಯಬೇಕಿದ್ದು, ನದಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಜಿಲ್ಲಾಡಳಿತ ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು. ಕಾವೇರಿ ನದಿ ತಟದಲ್ಲಿರುವ ಗ್ರಾಮಗಳು ಮತ್ತು ಪಟ್ಟಣಗಳ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ನದಿ ನೀರಿನ ಸಂರಕ್ಷಣೆಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಶೀಘ್ರದಲ್ಲೇ ಸಮಿತಿಯ ಪ್ರಮುಖರ ನಿಯೋಗ ಕ್ಷೇತ್ರ ಶಾಸಕರ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾವೇರಿ ನದಿ ಸಂರಕ್ಷಣೆಗೆ ಸೂಕ್ತ ಯೋಜನೆ ರೂಪಿಸುವಂತೆ ಮನವಿ ಸಲ್ಲಿಸಲಿದೆ ಎಂದು ಚಂದ್ರಮೋಹನ್ ತಿಳಿಸಿದರು.
ರಾಮನಾಥಪುರದಲ್ಲಿ 156ನೇ ಹುಣ್ಣಿಮೆ ಮಹಾ ಆರತಿ
16ನೇ ಕಾವೇರಿ ನದಿ ಜಾಗೃತಿ ಯಾತ್ರೆಯ ಸಂದರ್ಭದಲ್ಲಿ ರಾಮನಾಥಪುರದಲ್ಲಿ ಕಾವೇರಿ ಮಾತೆಗೆ 156ನೇ ಹುಣ್ಣಿಮೆ ತಿಂಗಳ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಳಭೋಯಿ, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಶಿವಪ್ಪ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು ಹಾಗೂ ಖಜಾಂಚಿ ಕೇಶವ ಮನವಿ ಮಾಡಿದ್ದಾರೆ.
