ಮೈಸೂರು: ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್) ಕೃತಕ ಬುದ್ಧಿಮತ್ತೆ ಆಧಾರಿತ ಐದು ವೆಬ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದ್ದು, ಭಾಷಾಂತರ, ಲಿಪ್ಯಂತರ ಸೇರಿದಂತೆ ವಿವಿಧ ಉದ್ದೇಶಗಳಿಗೆ ನೆರವಾಗಲಿವೆ. ದೇಶದ ಎಲ್ಲ ಪ್ರಾದೇಶಿಕ ಭಾಷಿಕರಿಗೆ ಸೇತುವೆಯಾಗಲಿವೆ.
‘ಅನುವಾದಿಕ’, ‘ಲಿಪ್ಯಂತರ’, ‘ಲಿಪಿಧ’, ‘ಅನುಲೇಖಿಕ’ ಹಾಗೂ ‘ಅನುವಾಚಿಕ’ ಎ.ಐ ವೆಬ್ ತಂತ್ರಾಂಶ ಗಳೊಂದಿಗೆ, ಕೃತಕ ಬುದ್ಧಿಮತ್ತೆಯೇತರ ‘ಧ್ವನಿ ಪರಿವರ್ತಕ’, ‘ಅಕ್ಷರಾಂಕ’, ‘ಶಬ್ಧ ಸಂಧಾನ’, ‘ನುಡಿಯಲವಿ’ ಹಾಗೂ ‘ಪಾಠಾಂತರ’ ತಂತ್ರಾಂಶಗಳನ್ನು ಬಿಡುಗಡೆ ಮಾಡಲಾಗಿದೆ. https://medha.ciil.org/ ನಲ್ಲಿ ಇವು ಸಿಗುತ್ತವೆ. ಪ್ರತಿ ತಂತ್ರಾಂಶದ ಹೆಸರನ್ನು ವೆಬ್ ಬ್ರೌಸರ್ಗಳಲ್ಲಿ ಹುಡುಕಾಡಿದರೂ ಸಿಗುತ್ತವೆ.
‘ಅನುವಾದಿಕ’ ಭಾಷಾಂತರ ತಂತ್ರಾಂಶವಾಗಿದ್ದು, ಇಂಗ್ಲಿಷ್ ಜೊತೆಗೆ ಎಲ್ಲ ಭಾರತೀಯ ಭಾಷೆಗಳ ಪಠ್ಯಗಳನ್ನು ಅನುವಾದಿಸಬಹುದಾಗಿದ್ದು, ಧ್ವನಿಯ ಮೂಲಕವೂ ಪಠ್ಯ ದಾಖಲಿಸಿ ಭಾಷಾಂತರಿಸುವ ಆಯ್ಕೆಯನ್ನೂ ನೀಡಲಾಗಿದೆ. ಎಲ್ಲ ಭಾರತೀಯ ಭಾಷಿಕರ ನಡುವಿನ ಅಂತರವನ್ನು ಕೊನೆ ಗೊಳಿಸಲಿದೆ’ ಎನ್ನುತ್ತಾರೆ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್.
‘ಲಿಪ್ಯಂತರ’ ತಂತ್ರಾಂಶವು ಪಠ್ಯವನ್ನು ಒಂದು ಲಿಪಿಯಿಂದ ಮತ್ತೊಂದು ಭಾಷಾ ಲಿಪಿಗೆ ಬದಲಿಸಬಹುದು. ಉರ್ದು ಹಾಗೂ ಕಾಶ್ಮೀರಿ ಭಾಷೆಗಳ ಅರೇಬಿಕ್ ಲಿಪಿ ಹೊರತುಪಡಿಸಿ ದೇಶದ ಬ್ರಾಹ್ಮಿ ಹಾಗೂ ದೇವನಾಗರಿ ಲಿಪಿಗಳನ್ನು ಬಳಸಬಹುದು. ‘ಲಿಪಿಧ’ ಒಸಿಆರ್ ತಂತ್ರಾಂಶವಾಗಿದ್ದು, ಚಿತ್ರ ಮಾದರಿ ಯಲ್ಲಿರುವ ಪಠ್ಯ ಹಾಗೂ ಕೈ ಬರಹವನ್ನು ಪಠ್ಯವಾಗಿ ಪರಿವರ್ತಿಸಬಹುದು.
‘ಅನುಲೇಖಿಕ’ ತಂತ್ರಾಂಶವು ಆಡಿಯೊ ಫೈಲ್ಗಳನ್ನು ಪಠ್ಯಗಳಾಗಿ ಬದಲಿಸಿದರೆ, ‘ಅನುವಾಚಿಕ’ ಪಠ್ಯವನ್ನು ಧ್ವನಿಯಾಗಿ ರೂಪಿಸುವ ತಂತ್ರಾಂಶವಾಗಿದೆ.
ಕೃತಕ ಬುದ್ಧಿಮತ್ತೆ ಯೇತರ ಟೂಲ್ ಆದ ‘ಧ್ವನಿ ಪರಿವರ್ತಕ’ವು wav, mp3 ಫೈಲ್ಗಳನ್ನು ಬೇರೆ ಬೇಕಾದ ಆಡಿಯೊ ವಿಧಾನಗಳಿಗೆ (ಫಾರ್ಮ್ಯಾಟ್) ಬದಲಿಸಿಕೊಡುತ್ತದೆ. ‘ನುಡಿಯಲವಿ’, ‘ಪಾಠಾಂತರ’ ತಂತ್ರಾಂಶಗಳು ಧ್ವನಿಯ ಗಾತ್ರ, ಅಂತರವನ್ನು ಹೇಳುತ್ತವೆ. ‘ಅಕ್ಷರಾಂಕ’ವು ಪಠ್ಯದಲ್ಲಿನ ಅಕ್ಷರ ಗಳನ್ನು ಯೂನಿಕೋಡ್ ಮಾದರಿಯಲ್ಲಿ (ಕೋಡ್ ವ್ಯಾಲ್ಯೂ) ಬಿಡಿಸಿಕೊಡುತ್ತದೆ. ಪಠ್ಯ ರೂಪಾಂತರಿಸಲು ಪ್ರೋಗ್ರಾಮರ್ ಗಳಿಗೆ ಸಹಾಯವಾಗಲಿದೆ.
ಪ್ರೊ.ಶೈಲೇಂದ್ರ ಮೋಹನ್ ಸಿಐಐಎಲ್ ನಿರ್ದೇಶಕಡಿಜಿಟಲ್ ಇಂಡಿಯಾ ಭಾಗವಾಗಿ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಸಿಐಐಎಲ್ ತಂತ್ರಾಂಶಗಳು ನೆರವಾಗಲಿವೆ. ಭಾಷಾ ಸಮಾನತೆಗೆ ಪ್ರೋತ್ಸಾಹ ನೀಡಲಾಗಿದೆ.
