ಬೆಂಗಳೂರು, ಆ.7: ಕರ್ನಾಟಕದಲ್ಲಿ ಜಾಗತಿಕ ತಂತ್ರಜ್ಞಾನ ಹೂಡಿಕೆಗಳನ್ನು ಮತ್ತಷ್ಟು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಗುಡ್ ವರ್ಕ್ಸ್ ಗ್ರೂಪ್ ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದ ಮೂಲಕ ರಾಜ್ಯಕ್ಕೆ ₹5,000 ಕೋಟಿ ಹೊಸ ಹೂಡಿಕೆ ಆಕರ್ಷಿಸುವುದು ಹಾಗೂ 50 ಹೊಸ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ಗಳ (GCC) ಸ್ಥಾಪನೆಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಇದರೊಂದಿಗೆ 62,500ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಈ ಪಾಲುದಾರಿಕೆ ಮೂಲಕ ಜಾಗತಿಕ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಜಿಸಿಸಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಅನುಕೂಲ ಕಲ್ಪಿಸಲಾಗುತ್ತದೆ. ಹೂಡಿಕೆ ಪ್ರೋತ್ಸಾಹ, ನೀತಿ ಬೆಂಬಲ, ಉದ್ಯಮ–ಶೈಕ್ಷಣಿಕ ಸಹಯೋಗ, ಕೌಶಲ್ಯಾಭಿವೃದ್ಧಿ ಮತ್ತು ತಂತ್ರಜ್ಞಾನ ಸಂಶೋಧನೆಗೆ ವಿಶೇಷ ಒತ್ತು ನೀಡಲಾಗುತ್ತದೆ.
ಒಪ್ಪಂದದ ಭಾಗವಾಗಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದು, ಅಂತಾರಾಷ್ಟ್ರೀಯ ಉದ್ಯಮ ನಿಯೋಗಗಳನ್ನು ರಾಜ್ಯಕ್ಕೆ ಕರೆತರುವುದು, ಜಿಸಿಸಿ ಕುರಿತ ಸಂಶೋಧನಾ ವರದಿಗಳನ್ನು ಸಿದ್ಧಪಡಿಸುವುದು, ಜ್ಞಾನ ಹಂಚಿಕೆ ವೇದಿಕೆಗಳನ್ನು ರೂಪಿಸುವುದು ಹಾಗೂ ಉತ್ತರ ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಮಧ್ಯಪ್ರಾಚ್ಯದ ಮಾರುಕಟ್ಟೆಗಳಲ್ಲಿ ಕರ್ನಾಟಕವನ್ನು ಉತ್ತೇಜಿಸುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.
ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಕರ್ನಾಟಕವು ಭಾರತದ ಜಿಸಿಸಿ ಪರಿಸರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು, ಗುಡ್ ವರ್ಕ್ಸ್ ಜೊತೆಗಿನ ಈ ಸಹಭಾಗಿತ್ವವು ರಾಜ್ಯದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಿದರು.
ಗುಡ್ ವರ್ಕ್ಸ್ ಗ್ರೂಪ್ ಸಹ-ಸಂಸ್ಥಾಪಕ ವಿಶ್ವಸ್ ಮುದ್ಗಲ್, ಈ ಪಾಲುದಾರಿಕೆಯು ₹5,000 ಕೋಟಿಗೂ ಅಧಿಕ ಹೂಡಿಕೆ, 50 ಹೊಸ ಜಿಸಿಸಿಗಳ ಸ್ಥಾಪನೆ ಹಾಗೂ 1.25 ಮಿಲಿಯನ್ ಚದರ ಅಡಿ ವಾಣಿಜ್ಯ ಮೂಲಸೌಕರ್ಯ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದರು.
ಸಹ-ಸಂಸ್ಥಾಪಕಿ ಸೋನಿಯಾ ಶರ್ಮಾ ಮಾತನಾಡಿ, ಈ ಯೋಜನೆಯಿಂದ 12,500ಕ್ಕೂ ಹೆಚ್ಚು ನೇರ ಹಾಗೂ 50,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಯುತ ಮಾನವ ಸಂಪನ್ಮೂಲ ನಿರ್ಮಾಣಕ್ಕೂ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಕರ್ನಾಟಕದಲ್ಲಿ 1,100ಕ್ಕೂ ಹೆಚ್ಚು ಜಿಸಿಸಿಗಳು ಕಾರ್ಯನಿರ್ವಹಿಸುತ್ತಿದ್ದು, ದೇಶದ ಒಟ್ಟು ಜಿಸಿಸಿಗಳಲ್ಲಿ ಸುಮಾರು ಶೇ.40ರಷ್ಟು ರಾಜ್ಯದಲ್ಲಿವೆ. ಈ ಹೊಸ ಪಾಲುದಾರಿಕೆಯು ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.
