ಶ್ರವಣಬೆಳಗೊಳ: ನಾಗಯ್ಯನಕೊಪ್ಪಲು ಹಾಗೂ ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆಯ ಬಾಗಿಲು ಮುಚ್ಚಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ರಸ್ತೆ ಬಾಗಿಲನ್ನು ಸಾರ್ವಜನಿಕರ ಸಂಚಾರಕ್ಕೆ ಶಾಶ್ವತವಾಗಿ ತೆರೆಯುವಂತೆ ಸಾರ್ವಜನಿಕರು ಹಾಗೂ ರೈತಾಪಿ ವರ್ಗದವರು ಶ್ರೀ ಜೈನಮಠದ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಮನವಿ ಮಾಡಿದ್ದಾರೆ.

ಶ್ರವಣಬೆಳಗೊಳದ ಹೃದಯಭಾಗದಲ್ಲಿರುವ ಈ ರಸ್ತೆಯ ಬಾಗಿಲು ಮುಚ್ಚಿರುವುದರಿಂದ ಶಾಲಾ ಮಕ್ಕಳು, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು, ರೈತರು ಹಾಗೂ ವಿವಿಧ ಕೆಲಸಗಳಿಗಾಗಿ ಕೃಷಿ ಇಲಾಖೆ ಮತ್ತು ನಾಡಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದರೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ರೈತರು ಹಾಗೂ ಇತರೆ ಸಾರ್ವಜನಿಕರು ವಿವಿಧ ಸರ್ಕಾರಿ ಕಚೇರಿಗಳಿಗೆ ತೆರಳಲು ಬಳಸುವ ಸಮಯ ಮತ್ತು ಪ್ರಯಾಣದ ದೂರವೂ ಕಡಿಮೆಯಾಗಲಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವಿಶೇಷವಾಗಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ತ್ವರಿತವಾಗಿ ತಲುಪಲು ಈ ರಸ್ತೆ ಮುಕ್ತವಾಗಿರುವುದು ಸಹಕಾರಿಯಾಗಲಿದೆ. ಸಾರ್ವಜನಿಕರ ಅನುಕೂಲ ಹಾಗೂ ಮಾನವೀಯ ದೃಷ್ಟಿಯಿಂದ ರಸ್ತೆಯ ಬಾಗಿಲನ್ನು ಶಾಶ್ವತವಾಗಿ ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜೈನಮಠದ ಪೂಜ್ಯರಿಗೆ ಮನವಿ ಮಾಡಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ರಸ್ತೆ ಬಾಗಿಲು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಶ್ರವಣಬೆಳಗೊಳದ ಸಾರ್ವಜನಿಕರು, ರೈತಾಪಿ ವರ್ಗದವರು ಹಾಗೂ ಶಾಲಾ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
