ಚಾಮರಾಜನಗರ:- ತಮ್ಮ ರಾಜಕೀಯ ಬದುಕಿನ ಆರಂಭದಿಂದಲೂ ಬೆಂಬಲ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದ ಚಾಮರಾಜನಗರ ನಗರಸಭೆಯ ಮಾಜಿ ಅಧ್ಯಕ್ಷ ದಿವಂಗತ ಎಸ್. ನಂಜುಂಡಸ್ವಾಮಿ ಅವರ ಸಮಾಧಿಗೆ ನೂತನ ಸಚಿವ ಸಿ. ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.
ಸಚಿವ ಪುಟ್ಟರಂಗಶೆಟ್ಟಿ ಅವರು ಪುತ್ರ ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಾಧಿ ಸ್ಥಳಕ್ಕೆ ತೆರಳಿ, ನಂಜುಂಡಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿವಂಗತ ನಂಜುಂಡಸ್ವಾಮಿ ಅವರ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಸ್ಮರಿಸಿಕೊಂಡರು.
ನಗರಸಭೆಯ ಅಧ್ಯಕ್ಷರಾಗಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದ ನಂಜುಂಡಸ್ವಾಮಿ ಅವರು ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು. ಸ್ಥಳೀಯ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳಲ್ಲಿ ಧ್ವನಿ ಎತ್ತುತ್ತಿದ್ದ ಅವರು, ಪುಟ್ಟರಂಗಶೆಟ್ಟಿ ಅವರ ರಾಜಕೀಯ ಪಯಣದಲ್ಲಿ ಪ್ರಮುಖ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಪುಟ್ಟರಂಗಶೆಟ್ಟಿ ಅವರ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದ ನಂಜುಂಡಸ್ವಾಮಿ ಅವರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ್ದರು. ಇವರಿಬ್ಬರ ನಡುವಿನ ಆತ್ಮೀಯ ಒಡನಾಟವೂ ರಾಜಕೀಯ ಕ್ಷೇತ್ರದ ವಲಯದಲ್ಲಿ ಗಮನ ಸೆಳೆದಿತ್ತು.
ಅಧಿಕಾರದ ಜವಾಬ್ದಾರಿ ದೊರೆತ ಬಳಿಕವೂ ತಮ್ಮ ರಾಜಕೀಯ ಬದುಕಿನಲ್ಲಿ ಜೊತೆಯಾಗಿ ನಿಂತವರನ್ನು ಸ್ಥರಿಸಿಕೊಂಡು ಸಮಾಧಿಗೆ ಭೇಟಿ ನೀಡಿರುವ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ನಡೆ ಕೃತಜ್ಞತೆ ಮಾನವೀಯತೆಯ ಸಂದೇಶ ಸಾರುವಂತಿತ್ತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ. ರೇಣುಕಾದೇವಿ, ಮುಖಂಡರಾದ ಬಿ.ಕೆ. ರವಿಕುಮಾರ್, ಎಸ್.ಪಿ.ಕೆ. ಉಮೇಶ್, ಮಹೇಶ್ ಕುದರ್ ಡಾ. ಪುಷ್ಪಾಂಕ್ ಕುದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-ಶ್ರೀ ಸಾಯಿ ಎಸ್ ಮಂಜು
