ಚನ್ನರಾಯಪಟ್ಟಣ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಟಿಪ್ಪು ಯುವಕರ ಸಂಘ ಚನ್ನರಾಯಪಟ್ಟಣ ಇವರ ವತಿಯಿಂದ ಸ್ವಯಂ ಪ್ರೇರಿತ ರಕ್ತ ಕೇಂದ್ರ ಚನ್ನರಾಯಪಟ್ಟಣ ಹಾಗೂ ಪುನರ್ಜೀವ ಸ್ವಯಂ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು,
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಟಿಪ್ಪು ಯುವಕರ ಸಂಘ ಅಧ್ಯಕ್ಷರಾದ ಇಮ್ರಾನ್ ಮಾತನಾಡಿ ಈ ದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ಈದ್ ಮಿಲಾದ್ ಹಬ್ಬದ ಸಂಭ್ರಮ ಹಾಗೂ ಸಂತೋಷದೊಂದಿಗೆ ಬೇರೆ ಕುಟುಂಬಗಳು ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಸುವ ಭಾಗ್ಯ ನಮಗೆ ದೇವರು ಕಲ್ಪಿಸಿ ಕೊಟ್ಟಿದ್ದಾನೆ ಎಂದು ತಿಳಿಸಿದರು,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಎಚ್ ಜಿ ಭರತ್ ಕುಮಾರ್ ಮಾತನಾಡಿ ಚನ್ನರಾಯಪಟ್ಟಣ ಟಿಪ್ಪು ಯುವಕರ ಸಂಘವು ಇಂದು ಸಮಾಜಕ್ಕೆ ಅತ್ಯುತ್ತಮ ಸೇವೆ ಮಾಡುವ ಉದ್ದೇಶದಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ, ಈ ಶಿಬಿರದಲ್ಲಿ ಈ ಸಂಸ್ಥೆಯ ಎಲ್ಲಾ ಯುವಕರು ಹಾಗೂ ಕುಟುಂಬದವರು ಹಬ್ಬದ ವಾತಾವರಣದಲ್ಲೂ ಸಹ ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡುತ್ತಿರುವುದು ಖುಷಿಯ ವಿಚಾರ, ಯಾಕೆಂದರೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ ರಕ್ತದಾನದ ಮಹತ್ವವನ್ನು ತಿಳಿದಿರುವ ಈ ಸಂಸ್ಥೆಯ ಹಲವಾರು ಸ್ವಯಂಸೇವಕರು ಆಗಮಿಸಿ ರಕ್ತದಾನ ಮಾಡುವುದರ ಮೂಲಕ ಮೂರು ಜನರಿಗೆ ಜೀವದಾನ ನೀಡುತ್ತಿದ್ದಾರೆ, ಇದೇ ರೀತಿ ಸಮಾಜದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ ಇಂಥ ಕಾರ್ಯಕ್ರಮಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವುದರಿಂದ ನೂರಾರು ರೋಗಿಗಳ ಚಿಕಿತ್ಸೆಗೆ ಸರಿಯಾದ ಸಮಯಕ್ಕೆ ರಕ್ತವನ್ನು ಒದಗಿಸಲು ಸಾಧ್ಯವಾಗುತ್ತದೆ ಇಂಥಹ ಸಮಾಜಮುಖಿ ಸೇವೆಯನ್ನು ಯುವಕರು ಮುಂದುವರಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 40 ಜನ ರಕ್ತದಾನ ಮಾಡಿದ್ದರು, ಕಾರ್ಯಕ್ರಮದಲ್ಲಿ ಸಾಧಿಕ್, ಯಾಸಿನ್,ಹರ್ಷದ್, ಅಬು ಹಾಗೂ ಟಿಪ್ಪು ಸಂಸ್ಥೆಯ ಸರ್ವ ಸದಸ್ಯರು ಮತ್ತು ಪುನರ್ಜೀವ ಸ್ವಯಂಸೇವಾ ಸಂಸ್ಥೆಯ ಹಾಗೂ ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ.ಕೆ
