ಚನ್ನರಾಯಪಟ್ಟಣ: ಹಾಸನ ಕೃಷಿ ಮಹಾವಿದ್ಯಾಲಯದ RAWEP–2026 ಅಂತಿಮ ವರ್ಷದ ವಿದ್ಯಾರ್ಥಿಗಳ ವತಿಯಿಂದ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ‘ಕೃಷಿ ಹೊತ್ತಿಗೆ’ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಹಾಸನದ ಜಂಟಿ ಕೃಷಿ ನಿರ್ದೇಶಕ ಡಾ. ರಮೇಶ್ ಕುಮಾರ್ ಪಿ. ಅವರು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರೆಕೆರೆ, ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ.ಎಸ್. ಬಸವರಾಜು, RAWEP ಸಂಯೋಜಕಿ ಡಾ. ಶಶಿಕಲಾ, ಸಹ ಸಂಯೋಜಕಿ ಸಂಧ್ಯಾ, ಗಣೇಶ್ ಪ್ರಸಾದ್, ಸಹನಾ, ಚಂದನಾ, ಸ್ಮಿತಾ, ಗುರುಮೂರ್ತಿ, ಕೃಷಿ ಅಧಿಕಾರಿ ಪಲ್ಲವಿ, ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ATMA)ಯ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬರಗೂರು ಗ್ರಾಮದ ರೈತರು ಹಾಗೂ RAWEP–2026 ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರು ಮಾಹಿತಿ ಕೇಂದ್ರಕ್ಕೆ ‘ಕೃಷಿ ಹೊತ್ತಿಗೆ’ ಎಂಬ ಹೆಸರನ್ನು ನೀಡಿ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ವಿಭಾಗಗಳ ಚಾರ್ಟ್ಗಳು, ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳನ್ನು ಗಣ್ಯರು ಮತ್ತು ರೈತರಿಗೆ ಪರಿಚಯಿಸಿದರು. ಕೃಷಿಗೆ ಸಂಬಂಧಿಸಿದ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮಾಹಿತಿಯನ್ನು ವಿದ್ಯಾರ್ಥಿಗಳು ರೈತರಿಗೆ ಸರಳವಾಗಿ ವಿವರಿಸಿದರು.
ಕೀಟಶಾಸ್ತ್ರ ವಿಭಾಗದಲ್ಲಿ ವಿವಿಧ ಬೆಳೆಗಳಿಗೆ ಬಾಧಿಸುವ ಕೀಟಗಳು, ಅವುಗಳಿಂದ ಉಂಟಾಗುವ ಹಾನಿ ಹಾಗೂ ಸಮಗ್ರ ಕೀಟ ನಿರ್ವಹಣೆ (IPM) ಕುರಿತು ಮಾಹಿತಿ ನೀಡಲಾಯಿತು. ರೇಷ್ಮೆ ಕೃಷಿ ಹಾಗೂ ಜೇನು ಸಾಕಾಣಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಚಾರ್ಟ್ಗಳು ಮತ್ತು ಮಾದರಿಗಳ ಮೂಲಕ ರೈತರಿಗೆ ವಿವರಿಸಲಾಯಿತು.
ಇದೇ ಸಂದರ್ಭದಲ್ಲಿ ಬರಗೂರು ಗ್ರಾಮದ ರೈತರಿಗೆ ಕೃಷಿ ಔಷಧಿ ಸಿಂಪಡಿಸುವ ಯಂತ್ರದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಯಂತ್ರವನ್ನು ವಿತರಿಸಲಾಯಿತು. ಈ ಯಂತ್ರದ ಬಳಕೆಯಿಂದ ಬೆಳೆಗಳಿಗೆ ಔಷಧಿಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಸಿಂಪಡಿಸಲು ಸಾಧ್ಯವಾಗುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶವನ್ನು ಒಳಗೊಳ್ಳಬಹುದಾಗಿದೆ. ಅಲ್ಲದೆ, ಔಷಧಿಯ ಸರಿಯಾದ ಪ್ರಮಾಣದ ಬಳಕೆ, ವ್ಯರ್ಥತೆಯ ನಿಯಂತ್ರಣ ಹಾಗೂ ರೈತರ ಸಮಯ, ಶ್ರಮ ಮತ್ತು ವೆಚ್ಚ ಉಳಿತಾಯಕ್ಕೂ ಇದು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಪರಿಣಾಮಕಾರಿ ಸಿಂಪಡಣೆಯಿಂದ ಬೆಳೆಗಳಲ್ಲಿನ ಕೀಟ ಹಾಗೂ ರೋಗಗಳ ನಿಯಂತ್ರಣಕ್ಕೆ ನೆರವಾಗಿ ಉತ್ತಮ ಬೆಳೆ ಆರೋಗ್ಯ ಮತ್ತು ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳು ರೈತರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ರೈತರು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿವಿಧ ಮಾದರಿಗಳು ಮತ್ತು ಚಾರ್ಟ್ಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ಕೃಷಿ ಹೊತ್ತಿಗೆ’ ಮಾಹಿತಿ ಕೇಂದ್ರವು ರೈತರಿಗೆ ಕೃಷಿ ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರಾಯೋಗಿಕ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಜ್ಞಾನ ವೇದಿಕೆಯಾಗಿ ರೂಪುಗೊಂಡಿತು.
ವರದಿ : ಮಂಜುನಾಥ್ ಐ ಕೆ
