ಹಾಸನ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಡಾ. ಸೌಮ್ಯ ಮಣಿ ಹೇಳಿದರು.
ನಗರದಲ್ಲಿ ಆ.14ರಂದು ಆಯೋಜಿಸಿದ್ದ ಫೂಟ್ ಥೆರಪಿ ಶಿಬಿರದಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ವಿವಿಧ ಕಾಯಿಲೆಗಳ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ, ಮಾರ್ಗದರ್ಶನ ಹಾಗೂ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಉಡುಪಿ ಮೂಲದ ಡಾ. ರತ್ನಾಕರ ಶೆಟ್ಟಿ ಮಾತನಾಡಿ, ದೇಹದಲ್ಲಿ ರಕ್ತ ಸಂಚಾರ ಸಮರ್ಪಕವಾಗಿರುವುದು ಆರೋಗ್ಯಕ್ಕೆ ಮುಖ್ಯ. ನಿಯಮಿತವಾಗಿ ನಡೆದಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪರ್ಯಾಯ ಚಿಕಿತ್ಸಾ ವಿಧಾನಗಳ ಕುರಿತು ಮಾತನಾಡಿದ ಅವರು, ಥೆರಪಿ ಸೇರಿದಂತೆ ವಿವಿಧ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಇಂದಿನ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಹಾರ ಸೇವನೆ ಹಾಗೂ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ನಿರ್ದೇಶಕಿ ಸುಶೀಲಮ್ಮ, ಮಹಾನಗರ ಘಟಕದ ಅಧ್ಯಕ್ಷ ಎಚ್.ಪಿ. ರೋಹಿತ್, ಫೂಟ್ ಪಲ್ಸ್ ತರಬೇತಿ ಶಿಬಿರದ ರೋಹಿತ್ ಹಾಗೂ ನವೀನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಮಯೂರಿ, ನಿರ್ದೇಶಕರಾದ ಭಾಮಿನಿ ಮಂಜುನಾಥ್, ಸವಿತಾ ಭೂಷಣ್, ವೀಣಾದೇವರಾಜ್, ಭವ್ಯ ಎಸ್.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
– ಶಿವಕುಮಾರ್ ಕಟ್ಟಾಯ
