ಹಾಸನ, ಆ.15: ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಅಪಾರ ಜನರ ತ್ಯಾಗ, ಬಲಿದಾನ ಹಾಗೂ ಎರಡು ಶತಮಾನಗಳ ಸುದೀರ್ಘ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಈ ಸ್ವಾತಂತ್ರ್ಯದ ಘನತೆ ಹಾಗೂ ಗೌರವಕ್ಕೆ ಧಕ್ಕೆ ಬಾರದಂತೆ ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಮೂಲಕ ದೇಶದ ಗೌರವವನ್ನು ಎತ್ತಿಹಿಡಿಯಬೇಕು. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಜವಾಬ್ದಾರಿ ಬಹುದೊಡ್ಡದು. ಸಮಾಜದಲ್ಲಿನ ಅರೆಕೊರೆಗಳನ್ನು ತಿದ್ದಿ, ಜನರನ್ನು ಸರಿದಾರಿಗೆ ಕೊಂಡೊಯ್ಯುವ ಹೊಣೆಗಾರಿಕೆಯನ್ನು ಮಾಧ್ಯಮಗಳು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿ, ಸ್ವಾತಂತ್ರ್ಯದ ಘನತೆ ಮತ್ತು ಗೌರವವನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು ಎಂದು ಕರೆ ನೀಡಿ, ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಬಳಿಕ ಗಣ್ಯರು ಹಾಗೂ ಪತ್ರಕರ್ತರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಹಿರಿಯ ಪತ್ರಕರ್ತ ಹಾಗೂ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಎಂ.ವಿ. ಶಿವರಾಂ ಅವರ ಸಂಪಾದಕತ್ವದ ನೂತನ ‘ವ್ಯಂಗ್ಯ ಲೋಕ’ ಪಾಕ್ಷಿಕ ಪತ್ರಿಕೆಯನ್ನು ಎಸ್ಪಿ ಶುಭಾನ್ವಿತಾ ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಎನ್. ನಂಜುಂಡೇಗೌಡ, ಜಿ. ಪ್ರಕಾಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಎಸ್. ಪ್ರಮೋದ್, ರಾಷ್ಟ್ರೀಯ ಮಂಡಳಿ ಸದಸ್ಯ ರವಿ ನಾಕಲಗೂಡು, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಕಾರ್ಯದರ್ಶಿಗಳಾದ ಬಿ.ಆರ್. ಬೊಮ್ಮೇಗೌಡ, ಕೆ.ಎಂ. ಹರೀಶ್, ಡಿ.ಐ. ಖುಷ್ವಂತ್, ಖಜಾಂಚಿ ಪ್ರಕಾಶ್ ಬೆಳವಾಡಿ, ಕಾರ್ಯಕಾರಿ ಸಮಿತಿ ಸದಸ್ಯ ಚೌಡುವಳ್ಳಿ ಜಗದೀಶ್, ಮಾಜಿ ಅಧ್ಯಕ್ಷರಾದ ಬಿ.ಆರ್. ಉದಯಕುಮಾರ್, ಎಸ್.ಆರ್. ಪ್ರಸನ್ನಕುಮಾರ್, ಅತೀಖುರ್ ರೆಹಮಾನ್ ಸೇರಿದಂತೆ ವರದಿಗಾರರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
