ರಾಮನಾಥಪುರ: ಹೋಬಳಿಯ ಕೇರಳಾಪುರ ಗ್ರಾಮದಲ್ಲಿ ನೂತನ ಅಂಗನವಾಡಿ ಕಂ ಕ್ರಶ್ ಕೇಂದ್ರವನ್ನು ಶಾಸಕ ಎ. ಮಂಜು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಮಾಸಾಚರಣೆ, ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು. ಅಂಗನವಾಡಿಗೆ ಬರುವ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎ. ಮಂಜು ಹೇಳಿದರು.

ಗರ್ಭಿಣಿಯರಿಗೆ ಶುಭ ಹಾರೈಸಿದ ಅವರು, ಮಕ್ಕಳಿಗೆ ಅನ್ನಪ್ರಾಶನ ನೆರವೇರಿಸಿ ಅವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಶಾಸಕ ಎ. ಮಂಜು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹಲವು ವರ್ಷಗಳಿಂದ ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು.

ಸರ್ಕಾರ ರೈತರ ಜಮೀನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಗಬೇಕಾದ ನ್ಯಾಯಯುತ ಪರಿಹಾರವನ್ನು ಕಾಲಮಿತಿಯಲ್ಲಿ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ರೈತರಿಗೆ ಶೀಘ್ರ ಪರಿಹಾರ ದೊರಕುವಂತೆ ಅಗತ್ಯ ದಾಖಲೆಗಳು ಹಾಗೂ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಹಕ್ಕಿನ ಪರಿಹಾರ ದೊರಕುವವರೆಗೆ ಈ ವಿಚಾರವನ್ನು ಕೈಬಿಡುವುದಿಲ್ಲ. ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತಲಾಗುವುದು ಎಂದು ಶಾಸಕ ಎ. ಮಂಜು ತಿಳಿಸಿದರು.
– ಕುಮಾರಸ್ವಾಮಿ ಎಂ.ಎನ್.
