ಬೆಂಗಳೂರು, ಆ.15: ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಯುವ ಕವಿ ಹಾಗೂ ಚಿಂತಕ ಕನಕಪುರದ ಆನಂದ್ ಕುಮಾರ್ ಜಿ. ಅವರ ಚೊಚ್ಚಲ ಕವನ ಸಂಕಲನ ‘ಕರುನಾಡ ಕಂದ’ ಕೃತಿ ಲೋಕಾರ್ಪಣೆ, ಉಪನ್ಯಾಸ ಹಾಗೂ ಗುರುವಂದನೆ ಸಮಾರಂಭ ಆ.16ರಂದು ನಡೆಯಲಿದೆ.
ವಿಜಯನಗರದ 17ನೇ ಕ್ರಾಸ್ನಲ್ಲಿರುವ ರೂಪಾಲಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ತಿಳಿಸಿದ್ದಾರೆ.
ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಮಟ್ಟದ ಯೋಗ ಗುರು ಶ್ರೀ ಶ್ರೀ ಪ್ರಕಾಶ್ ಯೋಗಿ ಗುರೂಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಾಂಸ್ಕೃತಿಕ ಚಿಂತಕ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಸಿಸಿರಾ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ವೀಣಾ ಎನ್. ವಿನೋದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾಸ ಸಾಹಿತ್ಯ ಸಂಶೋಧಕ ಹಾಗೂ ವಿಜಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್. ವಾದಿರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃತಿ ಕುರಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೂ.ಗಿ. ಗಿರಿಯಪ್ಪ ಹಾಗೂ ಶಿಕ್ಷಕ-ಸಾಹಿತಿ ಗುಂಡೀಗೆರೆ ವಿಶ್ವನಾಥ್ ಮಾತನಾಡಲಿದ್ದಾರೆ. ಶಿಕ್ಷಣ ತಜ್ಞ ಡಾ. ವಿ. ರಘು, ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಭುಸ್ವಾಮಿ, ಖ್ಯಾತ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
