ಕೊರಟಗೆರೆ: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಕೊರಟಗೆರೆ ತಾಲ್ಲೂಕಿನಲ್ಲಿ ಮತಯಾಚನೆ ನಡೆಸಿದರು. ಬಿಜೆಪಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಕೆ.ಎಂ. ಸುರೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ವರದಿಯಾಗಿದೆ.
ಇತಿಹಾಸ ಪ್ರಸಿದ್ಧ ಕಟ್ಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ವಿವಿಧ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿ ಪದವೀಧರ ಮತದಾರರನ್ನು ಭೇಟಿಯಾದರು.

ಕಾಳಿದಾಸ ಸ್ಕೂಲ್, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಹೈಸ್ಕೂಲ್, ರಾಘವೇಂದ್ರ ಶಾಲೆ, ಗರ್ಲ್ಸ್ ಹೈಸ್ಕೂಲ್, ಚಾಣಕ್ಯ ಸ್ಕೂಲ್, ಜಿಕೆ ಮೆಮೋರಿಯಲ್ ಸ್ಕೂಲ್, ನ್ಯಾಯಾಲಯ ಸಂಕೀರ್ಣ, ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರಿಯದರ್ಶಿನಿ ಕಾಲೇಜು ಹಾಗೂ ರವೀಂದ್ರ ಭಾರತಿ ಸ್ಕೂಲ್ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಮತಯಾಚಿಸಿದರು.
ಈ ವೇಳೆ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ ನೌಕರರು ಹಾಗೂ ನೋಂದಾಯಿತ ಪದವೀಧರ ಮತದಾರರೊಂದಿಗೆ ಉದ್ಯೋಗಾವಕಾಶಗಳು, ಶಿಕ್ಷಣ ಕ್ಷೇತ್ರದ ಬೇಡಿಕೆಗಳು ಹಾಗೂ ಪದವೀಧರರ ಸಮಸ್ಯೆಗಳ ಕುರಿತು ಚರ್ಚಿಸಿದರು.

ನಂತರ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ. ಸುರೇಶ್, ಪದವೀಧರರ ಸಮಸ್ಯೆಗಳಿಗೆ ವಿಧಾನ ಪರಿಷತ್ತಿನಲ್ಲಿ ಧ್ವನಿಯಾಗುವುದಾಗಿ ಹೇಳಿದರು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಗುತ್ತಿಗೆ ಹಾಗೂ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ಖಾಸಗಿ ಶಾಲಾ-ಕಾಲೇಜು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತುವುದಾಗಿ ತಿಳಿಸಿದರು.
ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಭೇಟಿ ನೀಡದೆ, ಆಯ್ಕೆಯಾದ ಬಳಿಕವೂ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಾಮರಾಜಣ್ಣ ಅಭಿಪ್ರಾಯಪಟ್ಟರು.

ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕೆ.ಎಂ. ಸುರೇಶ್ ಪರವಾಗಿ ಮತಯಾಚಿಸಿದರು. ಉಭಯ ಪಕ್ಷಗಳು ಈ ಚುನಾವಣೆಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ಕುರಿತು ರಾಜ್ಯ ಮಟ್ಟದಲ್ಲೂ ಸಮನ್ವಯ ಸಭೆಗಳನ್ನು ನಡೆಸಿವೆ.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರು, ಜೆಡಿಎಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಪದವೀಧರ ಮತದಾರರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
