ರಾಮನಾಥಪುರ, ಆ.19: ಜೀವನದಿ ಕಾವೇರಿ ಸೇರಿದಂತೆ ಹಾರಂಗಿ, ಹೇಮಾವತಿ ಹಾಗೂ ಕಟ್ಟೇಪುರ ಅಣೆಕಟ್ಟು ವ್ಯಾಪ್ತಿಯ ನಾಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತದ ನಾಟಿ ಕಾರ್ಯಕ್ಕೆ ರೈತರು ಸಿದ್ಧತೆ ನಡೆಸುತ್ತಿದ್ದರೂ, ಈ ಬಾರಿ ಎದುರಾಗಿರುವ ಮಳೆ ಕೊರತೆ ಅನ್ನದಾತರನ್ನು ಆತಂಕಕ್ಕೀಡು ಮಾಡಿದೆ.
ರಾಮನಾಥಪುರ ಸೇರಿದಂತೆ ವಿವಿಧೆಡೆ ರೈತರು ಗದ್ದೆಗಳಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಆರಂಭಿಸಿದ್ದು, ಭತ್ತದ ಸಸಿಮಡಿ (ಒಗ್ಗು) ಕಾರ್ಯವೂ ಬಿರುಸುಗೊಂಡಿದೆ. ಆದರೆ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ನಾಲೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯದೆ ರೈತರು ಪ್ರತಿನಿತ್ಯ ಜಲಾಶಯಗಳತ್ತ ನೋಡುವಂತಾಗಿದೆ.
ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದ್ದು, ಹಾರಂಗಿ ಮತ್ತು ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ನಾಲೆಗಳಿಗೆ ಸೀಮಿತ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ, ಭತ್ತದ ಬೆಳೆಗೆ ನೀರಿನ ಅಭಾವದ ಭೀತಿ ಎದುರಾಗಿದೆ.
ಶತಮಾನ ಪೂರೈಸಿದ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟು
ಮೈಸೂರು ಅರಸರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟು ಶತಮಾನ ಪೂರೈಸಿದ್ದು, ಈ ಭಾಗದ ಭತ್ತದ ಬೆಳೆಗೆ ಪ್ರಮುಖ ಆಧಾರವಾಗಿದೆ. ತೀವ್ರ ಬರ ಪರಿಸ್ಥಿತಿ ಎದುರಾದ ಕೆಲ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು, ಕಾವೇರಿ ಮತ್ತು ಹೇಮಾವತಿ ಜಲಾನಯನ ಪ್ರದೇಶಗಳು ಉತ್ತಮವಾಗಿ ತುಂಬಿದರೆ ಮಾತ್ರ ಈ ಭಾಗದ ರೈತರ ಕೃಷಿ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯಲು ಸಾಧ್ಯವಾಗುತ್ತದೆ.
12 ಸಾವಿರಕ್ಕೂ ಹೆಚ್ಚು ಎಕರೆಗೆ ನೀರು
ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ರಾಜಮುಡಿ, ರಾಜಭೋಗ ಸೇರಿದಂತೆ ವಿವಿಧ ತಳಿಯ ಭತ್ತವನ್ನು ಬೆಳೆಯಲಾಗುತ್ತದೆ. ಮಳೆ ಕೊರತೆಯಿಂದಾಗಿ ಬಹುತೇಕ ರೈತರು ಮೂರು ತಿಂಗಳ ಅವಧಿಯ ಭತ್ತದ ಸಸಿಮಡಿ ಮಾಡುತ್ತಿದ್ದಾರೆ.
ಕಟ್ಟೇಪುರ ಕೃಷ್ಣರಾಜ ಅಣೆಕಟ್ಟಿನ ಎಡ ಮತ್ತು ಬಲದಂಡೆ ನಾಲೆಗಳು ಅರಕಲಗೂಡು ತಾಲೂಕಿನ ಕೊಣನೂರು, ರಾಮನಾಥಪುರ ಸೇರಿದಂತೆ ಕೆ.ಆರ್.ನಗರ ತಾಲೂಕಿನ ವಿವಿಧ ಪ್ರದೇಶಗಳ ಮೂಲಕ ಹಾದುಹೋಗುತ್ತವೆ. ಸುಮಾರು 12 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಈ ನಾಲೆಗಳು ಭತ್ತದ ಕೃಷಿಗೆ ಪ್ರಮುಖ ಜೀವನಾಡಿಯಾಗಿವೆ.
ಅರಕಲಗೂಡು ತಾಲೂಕಿನಲ್ಲಿಯೇ ಸಾವಿರಾರು ಎಕರೆ ಜಮೀನಿಗೆ ಈ ನೀರಾವರಿ ವ್ಯವಸ್ಥೆಯಿಂದ ನೀರು ದೊರೆಯುತ್ತದೆ. ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿದರೆ ಮಾತ್ರ ರೈತರು ಸಸಿಮಡಿ ಬೆಳೆಸಿ, ನಂತರ ಭತ್ತದ ನಾಟಿ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ರೈತರು ತಂಬಾಕು ಬೆಳೆ ಬೆಳೆಸಿ ಕಟಾವು ಪೂರ್ಣಗೊಳಿಸಿದ್ದಾರೆ. ಕೆಲವರು ನೆಲಗಡಲೆ, ಅಲಸಂದೆ, ಹೆಸರು, ಉದ್ದು, ಎಳ್ಳು ಸೇರಿದಂತೆ ವಿವಿಧ ದ್ವಿದಳ ಮತ್ತು ಇತರ ಬೆಳೆಗಳನ್ನು ಬೆಳೆದಿದ್ದರು.
ಆದರೆ ಮಳೆ ಕೈಕೊಟ್ಟ ಪರಿಣಾಮ ಫಸಲು ಪಡೆಯುವ ಹಂತದಲ್ಲಿದ್ದ ಬೆಳೆಗಳು ಒಣಗಿ ನಷ್ಟವಾಗಿವೆ. ಹೀಗಾಗಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬ ಪರಿಸ್ಥಿತಿ ರೈತರದ್ದಾಗಿದೆ. ಉಳಿದಿರುವ ತಂಬಾಕು ಬೆಳೆಯ ಕಟಾವು ಮುಗಿಸಿ ಇದೀಗ ಭತ್ತದ ಕೃಷಿಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ.
ಹೇಮಾವತಿ ಬಲದಂಡೆ ನಾಲೆ ವ್ಯಾಪ್ತಿಯಲ್ಲೂ ಆತಂಕ
ಹೇಮಾವತಿ ಬಲದಂಡೆ ನಾಲೆ ಸುಮಾರು 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಹಾಸನ ಜಿಲ್ಲೆಯ ವಿವಿಧ ತಾಲೂಕುಗಳ ಕೃಷಿ ಜಮೀನುಗಳಿಗೆ ನೀರು ಒದಗಿಸುತ್ತದೆ. ಹೊಳೆನರಸೀಪುರ, ಕೆ.ಆರ್.ನಗರ ಹಾಗೂ ಕೆ.ಆರ್.ಪೇಟೆ ತಾಲೂಕುಗಳ ವ್ಯಾಪ್ತಿಯಲ್ಲಿಯೂ ಈ ನೀರಾವರಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ.
ಈ ಪ್ರದೇಶಗಳಲ್ಲಿ ಭತ್ತದ ನಾಟಿಗೆ ರೈತರು ಸಿದ್ಧತೆ ನಡೆಸುತ್ತಿದ್ದರೂ, ಜಲಾಶಯಗಳಲ್ಲಿ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗುವ ಕುರಿತು ಆತಂಕ ಮುಂದುವರಿದಿದೆ.
ಚಳಿಗಾಲಕ್ಕೆ ಸಿಲುಕುವ ಆತಂಕ
ರಾಮನಾಥಪುರ ಮತ್ತು ಕೊಣನೂರು ಭಾಗದಲ್ಲಿ ಸಾಮಾನ್ಯವಾಗಿ ಆಗಸ್ಟ್ ಮೊದಲ ವಾರದಲ್ಲೇ ತಂಬಾಕು ಕಟಾವು ಮುಗಿಸಿ ಭತ್ತದ ನಾಟಿ ಕಾರ್ಯ ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಮಳೆ ಕೊರತೆಯಿಂದ ತಂಬಾಕು ಕಟಾವು ತಡವಾಗಿದ್ದು, ಭತ್ತದ ನಾಟಿಯೂ ಸೆಪ್ಟೆಂಬರ್ ತಿಂಗಳಿಗೆ ಮುಂದೂಡುವ ಸಾಧ್ಯತೆ ಇದೆ.
ಸೆಪ್ಟೆಂಬರ್ನಲ್ಲಿ ನಾಟಿ ಮಾಡಿದ ಭತ್ತದ ಪೈರು ಗರ್ಭಧಾರಣೆ ಮತ್ತು ತೆನೆ ಬರುವ ಹಂತದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಚಳಿಗೆ ಸಿಲುಕುವ ಆತಂಕ ರೈತರಲ್ಲಿದೆ. ಇದರಿಂದ ಇಳುವರಿ ಕುಂಠಿತವಾಗುವ ಸಾಧ್ಯತೆಯೂ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ತಂಬಾಕು ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯ ಪರಿಣಾಮ ಮಣ್ಣಿನ ಫಲವತ್ತತೆ ಕುಸಿಯುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಪ್ರಮುಖ ಆಹಾರ ಬೆಳೆಯಾದ ಭತ್ತದ ಕೃಷಿಯ ಮೇಲೂ ಇದರ ಪರಿಣಾಮ ಬೀರುವ ಆತಂಕವಿದೆ.
ನೀರಿನ ಕೊರತೆಯ ನಡುವೆಯೂ ನಾಟಿಗೆ ಸಿದ್ಧತೆ
“ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಕೃಷ್ಣರಾಜ ಅಣೆಕಟ್ಟು, ಹಾರಂಗಿ, ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರದಲ್ಲಿ ಈ ಬಾರಿ ನೀರಿನ ಕೊರತೆ ಇದೆ. ಆದರೂ ತಗ್ಗು ಪ್ರದೇಶದ ಕೆಲ ರೈತರು ಮೂರು ತಿಂಗಳ ಭತ್ತದ ಸಸಿಮಡಿ ಹಾಗೂ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಯಬೇಕು” ಎಂದು ಗಂಗೂರು ಗ್ರಾಮದ ರೈತ ಮುಖಂಡ ಶಂಕರೇಗೌಡ ತಿಳಿಸಿದ್ದಾರೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
