ಬೇಲೂರು: ಅರಣ್ಯ ಪ್ರದೇಶಗಳ ನಾಶ ಮತ್ತು ಆನೆಗಳ ಆವಾಸಸ್ಥಾನಗಳ ಒತ್ತುವರಿಯಿಂದ ಮಾನವ–ಆನೆ ಸಂಘರ್ಷ ಹೆಚ್ಚುತ್ತಿದ್ದು, ಆನೆಗಳ ಆವಾಸಸ್ಥಾನವನ್ನು ಸಂರಕ್ಷಿಸುವ ಮೂಲಕವೇ ಸಂಘರ್ಷವನ್ನು ಕಡಿಮೆ ಮಾಡಲು ಸಾಧ್ಯ ಎಂದು ನ್ಯಾಯಾಧೀಶೆ ಶಶಿಕಲಾ ಎಂ.ಎಸ್. ಹೇಳಿದರು.
ಅರೇಹಳ್ಳಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಹಾಸನ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಮತ್ತು ಆನೆಗಳ ನಡುವಿನ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಆನೆಗಳು ಮಾನವರ ಪ್ರದೇಶಕ್ಕೆ ಬರುತ್ತಿವೆಯೇ ಅಥವಾ ಮಾನವರು ಆನೆಗಳ ಆವಾಸಸ್ಥಾನದತ್ತ ತೆರಳುತ್ತಿದ್ದಾರೆಯೇ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅರಣ್ಯ ನಾಶ, ಆನೆಗಳ ನೈಸರ್ಗಿಕ ಆವಾಸಸ್ಥಾನದ ಒತ್ತುವರಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ವ್ಯಾಪ್ತಿ ಕಡಿಮೆಯಾಗುತ್ತಿರುವುದರಿಂದ ಆಹಾರ ಮತ್ತು ನೀರಿಗಾಗಿ ಆನೆಗಳು ಮಾನವ ವಸತಿ ಪ್ರದೇಶಗಳತ್ತ ಬರುವಂತಾಗಿದೆ ಎಂದು ತಿಳಿಸಿದರು.
ಮಾನವ–ಆನೆ ಸಂಘರ್ಷವನ್ನು ಕೇವಲ ವನ್ಯಜೀವಿ ಸಮಸ್ಯೆಯಾಗಿ ನೋಡದೆ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಗಂಭೀರ ವಿಚಾರವಾಗಿ ಪರಿಗಣಿಸಬೇಕು. ಆನೆಗಳು ಅರಣ್ಯದ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವುಗಳ ಉಳಿವು ಅರಣ್ಯದ ಉಳಿವಿನೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದರು.
ಆನೆಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಶ್ವ ಆನೆ ದಿನಾಚರಣೆಯಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಕಾಳಜಿ ಬೆಳೆಸಿಕೊಂಡು ಪರಿಸರಕ್ಕೆ ಹಾನಿಯಾಗದ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಹಿಂದೆ ಆನೆಗಳನ್ನು ನೋಡಲು ಜನರು ಸರ್ಕಸ್ ಅಥವಾ ಮೈಸೂರು ದಸರಾವನ್ನು ಅವಲಂಬಿಸುತ್ತಿದ್ದರು. ಪ್ರಾಣಿಗಳಿಗೆ ಹಿಂಸೆ ನೀಡಬಾರದು ಎಂಬ ಕಾರಣದಿಂದ ಸರ್ಕಸ್ಗಳಲ್ಲಿ ಕಾಡುಪ್ರಾಣಿಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ ಪೀಳಿಗೆಯ ಮಕ್ಕಳು ಆನೆಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲೇ ಗೌರವದಿಂದ ನೋಡುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಯತೀಶ್ ಬಿ.ಜಿ. ಸ್ವಾಗತಿಸಿದರು. ಪ್ರಾಂಶುಪಾಲ ಮಂಜುನಾಥ್ ಎಚ್.ಎಸ್., ಉಪ ಪ್ರಾಂಶುಪಾಲ ಶಿವಕುಮಾರ್ ಎಸ್.ಎನ್. ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಆನೆಗಳ ಸಂರಕ್ಷಣೆ ಕುರಿತು ವಸ್ತುಪ್ರದರ್ಶನ, ಉಪನ್ಯಾಸ, ವೆಬಿನಾರ್ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ವಿ., IFS, ಹಿರಿಯ ವಿಜ್ಞಾನಿ ಡಾ. ಎಂ. ಆನಂದ ಕುಮಾರ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, IFS ಅವರು ಆನೆಗಳ ಸಂರಕ್ಷಣೆ, ಮಾನವ–ಆನೆ ಸಂಘರ್ಷದ ಕಾರಣಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು.
