ಚನ್ನರಾಯಪಟ್ಟಣ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ವಿಳಂಬ ಮಾಡುತ್ತಿರುವ ತಾಲೂಕು ಆಡಳಿತದ ಕಾರ್ಯವೈಖರಿಯನ್ನು ಖಂಡಿಸಿ, ಆ.25ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಕಚೇರಿ ಆವರಣದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಅಂಬೇಡ್ಕರ್ ಅಭಿಮಾನಿಯಾದ ನಂಜುಂಡ ಮೈಂಡ್ ತಿಳಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಪಡಿಸುವಂತೆ ಈ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದುವರೆಗೆ ಪ್ರತಿಮೆ ಅನಾವರಣ ಗೊಳಿಸದಿರುವುದು ನಾಚಿಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ತಾಲೂಕು ಆಡಳಿತವು ಕೂಡಲೇ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಪಡಿಸಬೇಕು. ಇಲ್ಲವಾದಲ್ಲಿ ಆ.25ರಿಂದ ನಿರಂತರವಾಗಿ ವಿವಿಧ ರೀತಿಯ ಚಳುವಳಿ ಹಾಗೂ ಹೋರಾಟಗಳನ್ನು ನಡೆಸಲಾಗುವುದು ಎಂದು ನಂಜುಂಡ ಮೈಮ್ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳಾದ ನಂಜುಂಡ ಮೈಮ್, ಪರಮ ಗಂಗಾಧರ್, ಗನ್ನಿ ವಿಶ್ವನಾಥ್, ಮುಳ್ಕೆರೆ ಪ್ರಶಾಂತ್, ಎಲ್ ಐ ಸಿ ಕುಮಾರ್, ಮಣಿಕಂಠ, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
