ತುಮಕೂರು : ದೇಶದಲ್ಲಿಯೇಅನ್ನ,ಅಕ್ಷರ ಮತ್ತು ಆಶ್ರಯ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಶ್ರೀಸಿದ್ದಗಂಗಾ ಮಠ, ತನ್ನ ಶೈಕ್ಷಣಿಕ ಸಂಸ್ಥೆಗಳನ್ನು ಹೊರರಾಜ್ಯ ಮತ್ತು ದೇಶಗಳಲ್ಲಿ ತೆರೆಯುವ ಮೂಲಕ ಅಲ್ಲಿನ ಭಾರತೀಯರಿಗೂ ಸಂಸ್ಕಾರಯುತ ಶಿಕ್ಷಣ ದೊರೆಯುವಂತೆ ಮಾಡಲಿ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮತ್ತು ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಮುರುಳೀಧರ ಹಾಲಪ್ಪ ಮನವಿ ಮಾಡಿದ್ದಾರೆ.

ಇಂದು ಸಿದ್ದಗಂಗಾ ಮಠ್ಯಾಧ್ಯಕ್ಷರಾದ ಶ್ರೀಶ್ರೀಸಿದ್ದಲಿಂಗಸ್ವಾಮೀಜಿಗಳು ಮುರಳೀಧರ ಹಾಲಪ್ಪನವರ ಮನೆಗೆ ಆಗಮಿಸಿದ್ದ ವೇಳೆ ಮುರಳೀಧರಹಾಲಪ್ಪ ದಂಪತಿಗಳು ನಾದಸ್ವರದೊಂದಿಗೆ ತಮ್ಮ ಮನೆಗೆ ಬರಮಾಡಿಕೊಂಡು ನಂತರ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು,ನಂತರ ಶ್ರೀಗಳ ಮುಂದೆ ಕೋರಿಕೆ ವ್ಯಕ್ತಪಡಿಸಿದ ಮುರುಳೀಧರ ಹಾಲಪ್ಪ,ಸಿದ್ದಗಂಗಾ ಶಿಕ್ಷಣ ಸಂಸ್ಥೆ ಎಂದರೆ ಇಡೀ ದೇಶದಲ್ಲಿಯೇ ಗುಣಮಟ್ಟದ ಶಿಕ್ಷಣದ ಜೊತೆಗೆ, ಸಂಸ್ಕಾರಯುತ ಶಿಕ್ಷಣಕ್ಕೆ ಒಳ್ಳೆಯ ಹೆಸರಿದೆ.ಇದು ಬೇರೆ ಬೇರೆ ದೇಶದ ಜನರಿಗೂ ಲಭ್ಯವಾಗಬೇಕೆಂಬುದು ನಮ್ಮ ಇಚ್ಛೆ ಹಾಗಾಗಿ ವಿದೇಶಗಳಲ್ಲಿಯೂ ಸಿದ್ದಗಂಗಾ ಸಂಸ್ಥೆ ತನ್ನ ಶಿಕ್ಷಣ ಸಂಸ್ಥೆ ತೆರೆದರೆ ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜೆಎಸ್ಎಸ್ ಸಂಸ್ಥೆ,ಬಿಜಿಎಸ್ ಸಂಸ್ಥೆಗಳು ಈಗಾಗಲೇ ನೆರೆಯ ರಾಷ್ಟ್ರಗಳಾದ ಬೂತಾನ್, ದೆಹಲಿ, ನೇಪಾಳಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಲ್ಲಿನ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಒದಗಿಸುತ್ತಿವೆ.ಅಲ್ಲದೆ ಮುದ್ದೇನಹಳ್ಳಿಯ ಶ್ರೀಸತ್ಯಸಾಯಿ ಸೇವಾಶ್ರಮವೂ ಸಹ ರಾಜ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿಯೂ ಸೇವಾಶ್ರಮಗಳನ್ನು ತೆರದು ಶಿಕ್ಷಣ ನೀಡುವ ಕೆಲಸ ಮಾಡುತ್ತಿವೆ.ಸಿದ್ದಗಂಗಾ ಕ್ಷೇತ್ರ ಅನ್ನ, ಅಕ್ಷರ,ಆಶ್ರಯಕ್ಕೆ ಹೆಸರುವಾಸಿ,ಹಾಗಾಗಿ ಅವರು ಕರ್ನಾಟಕದ ಜೊತೆಗೆ ಬೇರೆ ರಾಜ್ಯಗಳಲ್ಲಿಯೂ ಹಾಗೂ ಹೊರ ದೇಶಗಳಲ್ಲಿಯೂ ಶಿಕ್ಷಣ ಸಂಸ್ಥೆ ತೆರೆದರೆ ಒಳ್ಳೆಯದು.ಹಾಗಾಗಿ ನಮ್ಮ ಮನವಿಯನ್ನು ಸಿದ್ದಗಂಗಾ ಶ್ರೀಗಳ ಮುಂದೆ ವ್ಯಕ್ತಪಡಿಸಿರುವುದಾಗಿ ಮುರುಳೀಧರ ಹಾಲಪ್ಪ ತಿಳಿಸಿದರು.
ಪಾದಪೂಜೆ ಸ್ವೀಕರಿಸಿ,ರೈತ ಮಹಿಳೆಯರಿಗೆ ಪುರಸ್ಕರಿಸಿ ಮಾತನಾಡಿದ ಶ್ರೀಗಳು,ರಾಜ್ಯದಲ್ಲಿ ಬರವಿದೆ.ಆಗಸ್ಟ್ ತಿಂಗಳು ಮುಗಿಯುತ್ತಾ ಬಂದರೂ ಮಳೆಯಿಲ್ಲ.ಶೇಂಗಾ ಬಿತ್ತನೆ ಸಾಧ್ಯವಾಗಿಲ್ಲ.ಅಲ್ಪ, ಸ್ವಲ್ಪ ರಾಗಿ ಬಿತ್ತನೆಯಾಗಿದೆ.ಅದು ಮಳೆಯಿಲ್ಲದೆ ಒಣಗುತ್ತಿದೆ. ಸರಕಾರವೂ ಸಹ ಹಲವಾರು ಕ್ರಮಕೈಗೊಂಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ.ನಮಗೆ ದೇವಾಲಪುರಕೆರೆಯಲ್ಲಿ ಸ್ವಲ್ಪ ನೀರಿದೆ.ಅದನ್ನೇ ಬಳಕೆ ಮಾಡುತ್ತಿದ್ದೇವೆ.ಮಕ್ಕಳಿಗೆ ಕಡಿಮೆ ನೀರು ಬಳಕೆ ಮಾಡುವಂತಹ ಸಲಹೆ ನೀಡುತ್ತಿದ್ದೇವೆ.ಸರಕಾರ ಈ ನಿಟ್ಟಿನಲ್ಲಿಕ್ರಮ ಕೈಗೊಳ್ಳಲಿದೆ ಎಂಬ ನಂಬಿಕೆ ನಮಗಿದೆ.ಮಠ, ಮಾನ್ಯಗಳು ಸಹ ತಮ್ಮ ಶಕ್ತಿ ಮೀರಿ ಬರಕ್ಕೆ ಸ್ಪಂದಿಸುತ್ತಿವೆ ಎಂದರು.
ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ ಎಂದರೆ ಅದಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ.ನೀರು, ಅನ್ನ, ವಿದ್ಯುತ್ ಇವುಗಳನ್ನು ಇಂತಹ ಬರಗಾಲದ ಸಂದರ್ಭದಲ್ಲಿ ಮಿತವಾಗಿ ಬಳಕೆ ಮಾಡಬೇಕಾಗಿದೆ.ಅವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ಈ ಆದರ್ಶಗಳನ್ನು ಹೇಳಿಕೊಡುತ್ತಿದ್ದರು.ಆದರೆ ಇಂದು ವಿಭಕ್ತ ಕುಟುಂಬದಿಂದ ಮಕ್ಕಳಲ್ಲಿ ಶಿಕ್ಷಣವಿದೆಯೇ ಹೊರತು ಸಂಸ್ಕಾರವಿಲ್ಲ. ಹಾಗಾಗಿ ದಾರಿತಪ್ಪುತಿದ್ದಾರೆ.ಅವರನ್ನುದಾರಿಗೆತರುವುದುಒಂದು ಸವಾಲಿನ ಕೆಲಸವಾಗಿದೆ.ಜೆನ್ ಜಿ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಸಂಸ್ಕಾರವೂ ಬೇಕಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಸಾಕಷ್ಟು ಒಳ್ಳೆಯ ಕೆಲಸಗಳನ್ನು ದಂಪತಿಗಳಿಬ್ಬರು ಮಾಡುತ್ತಿದ್ದಾರೆ. ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ಪ್ರತಿಭಾವಂತ ರೈತರು, ರೈತ ಮಹಿಳೆಯರನ್ನು ಗುರುತಿಸಿ,ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಸಿದ್ದಗಂಗಾ ಶಿಕ್ಷಣ ಸಂಸ್ಥೆ ವಿಸ್ತರಿಸಬೇಕೆಂಬ ಮುರುಳೀಧರ ಹಾಲಪ್ಪ ಅವರ ಕೋರಿಕೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಈಡೇರಿಸುವುದು ಕಷ್ಟ.ಭೂಮಿಯ ಬೆಲೆ ಗಗನ ಮುಖಿಯಾಗಿದೆ.ಅಂಗ್ಲಮಾಧ್ಯಮ ಶಿಕ್ಷಣದ ಕಡೆಗೆ ಎಲ್ಲರ ಒಲವಿದೆ.ಹಳ್ಳಿ ಶಾಲೆಗಳು ಉಳಿಸುವುದು ದೊಡ್ಡ ಸವಾಲಾಗಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ನುಡಿದರು.
ಹಾಲಪ್ಪ ಪ್ರತಿಷ್ಠಾನದಿಂದ ಪ್ರತಿಭಾವಂತ ರೈತ ಮಹಿಳೆಯರನ್ನು ಶ್ರೀಗಳು ಅಭಿನಂದಿಸಿದರು. ಈ ವೇಳೆ ಪೃಥ್ವಿರಾಜ್ ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
