ಕೊರಟಗೆರೆ:- ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆದರ್ಶ, ದೂರದೃಷ್ಟಿ, ಸಾಮಾಜಿಕ ಕಳಕಳಿ ಮತ್ತು ಜನಪರ ಚಿಂತನೆಗಳನ್ನು ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹಾಲಪ್ಪ ಪ್ರತಿಷ್ಠಾನದ ಮುಖ್ಯಸ್ಥ ಮುರಳೀಧರ ಹಾಲಪ್ಪ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನ ಹಾಗೂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು 21ನೇ ಶತಮಾನದ ಭಾರತದ ಕನಸು ಕಂಡ ದೂರದೃಷ್ಟಿಯ ನಾಯಕರು. ದೇಶದಲ್ಲಿ ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಗ್ರಾಮೀಣ ಆಡಳಿತಕ್ಕೆ ಹೊಸ ದಿಕ್ಕು ನೀಡಿದರು. ಯುವಜನರ ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದರು ಎಂದರು.
ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಹರಿಕಾರರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಲಪಡಿಸಿದ ಮಹಾನ್ ನಾಯಕರು. ಹಿಂದುಳಿದ, ಶೋಷಿತ ಹಾಗೂ ಅವಕಾಶ ವಂಚಿತ ಸಮುದಾಯಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ. ಇಬ್ಬರೂ ನಾಯಕರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶ ದೊರೆಯಬೇಕು ಎಂಬ ಆಶಯದೊಂದಿಗೆ ಆಡಳಿತ ನಡೆಸಿದ್ದರು. ಅವರ ಚಿಂತನೆಗಳು ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ದಾರಿದೀಪವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದನೆ
ಕಾರ್ಯಕ್ರಮದ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುರಳೀಧರ ಹಾಲಪ್ಪ ಅವರ ಗಮನಕ್ಕೆ ತಂದರು. ಕಾಲೇಜಿನ ಸಮೀಪ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದು, ಕಾಲೇಜಿನ ಬಳಿ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಕಾಲೇಜಿನಲ್ಲಿ ಸಮರ್ಪಕ ಶೌಚಾಲಯ ಹಾಗೂ ಸ್ಯಾನಿಟರಿ ಪ್ಯಾಡ್ ವಿಲೇವಾರಿ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಮನವಿಗೆ ತಕ್ಷಣ ಸ್ಪಂದಿಸಿದ ಮುರಳೀಧರ ಹಾಲಪ್ಪ ಅವರು ಸ್ಥಳದಲ್ಲೇ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಕೆಎಸ್ಆರ್ಟಿಸಿ ತುಮಕೂರು ಜಿಲ್ಲಾ ನಿಯಂತ್ರಕ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಳೆಯಿಂದಲೇ ಕಾಲೇಜಿನ ಬಳಿ ಕೆಎಸ್ಆರ್ಟಿಸಿ ಬಸ್ಗಳನ್ನು ನಿಲುಗಡೆ ಮಾಡುವುದರ ಜತೆಗೆ ಪಿಕ್ಅಪ್ ಮತ್ತು ಡ್ರಾಪ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಬಸ್ ನಿಲುಗಡೆಗೆ ನಿಗದಿತ ಸ್ಥಳಗಳ ವ್ಯವಸ್ಥೆ ಜಾರಿಗೆ ಬರಲಿದ್ದು, ಯಾವ ಬಸ್ ಎಲ್ಲಿದೆ ಎಂಬುದನ್ನು ಆ್ಯಪ್ ಮೂಲಕ ತಿಳಿದುಕೊಳ್ಳುವ ವ್ಯವಸ್ಥೆಯೂ ಇರಲಿದೆ. ಬಸ್ ನಿಗದಿತ ಸ್ಥಳದಲ್ಲಿ ನಿಲ್ಲಿಸದಿದ್ದಲ್ಲಿ ಆ್ಯಪ್ ಮೂಲಕವೇ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿನ ಮುಂಭಾಗದಲ್ಲಿ ಬಸ್ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ತಿಳಿಸಿದರು.
ಸ್ಯಾನಿಟರಿ ಪ್ಯಾಡ್ ವಿಲೇವಾರಿಗೆ ವ್ಯವಸ್ಥೆ
ಕಾಲೇಜಿನ ಶೌಚಾಲಯ ಹಾಗೂ ಸ್ಯಾನಿಟರಿ ಪ್ಯಾಡ್ಗಳ ಸಮಸ್ಯೆ ಕುರಿತು ಪುರಸಭೆ ಮುಖ್ಯಾಧಿಕಾರಿ ಉಮೇಶ್ ಅವರೊಂದಿಗೆ ಚರ್ಚಿಸಲಾಯಿತು. ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮಷೀನ್ ಅಳವಡಿಸುವುದರ ಜತೆಗೆ ಬಳಸಿದ ಪ್ಯಾಡ್ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಉಮೇಶ್ ಭರವಸೆ ನೀಡಿದರು.
ಜನ್ಮ ದಿನಾಚರಣೆ ಅಂಗವಾಗಿ ‘ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಅವರ ಆಡಳಿತ, ಸಾಮಾಜಿಕ ಸುಧಾರಣೆ ಹಾಗೂ ಯುವಜನತೆಗೆ ನೀಡಿದ ಪ್ರೇರಣೆ’ ವಿಷಯದ ಕುರಿತು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಈರಪ್ಪ ನಾಯಕ, ಮಹಿಳಾ ಕಾಂಗ್ರೆಸ್ ತಾಲೂಕು ಅಧ್ಯಕ್ಷೆ ಜಯಮ್ಮ, ಕಾಂಗ್ರೆಸ್ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವೆಂಕಟೇಶಮೂರ್ತಿ, ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ದರ್ಶನ್, ಉಪನ್ಯಾಸಕರಾದ ದೀಪಾ, ಕ್ರೀಡಾ ಶಿಕ್ಷಕಿ ಸೌಭಾಗ್ಯ, ಮುನಿರಾಜ್, ದೇವರಾಜು, ಡಾ. ಶಿವಪ್ಪ, ಅಶ್ವಾಕ್ ಅಹಮದ್, ಮುಖಂಡರಾದ ಲಕ್ಷ್ಮಮ್ಮ, ಲಕ್ಷ್ಮಿದೇವಿ, ಶಂಕರಮ್ಮ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
‘ನಾಳೆಯಿಂದಲೇ ಕಾಲೇಜು ಬಳಿ ಬಸ್ ನಿಲುಗಡೆ’
ಬಸ್ ಎಲ್ಲಿ ನಿಲ್ಲಿಸಬೇಕು ಎಂಬುದಕ್ಕೆ ನಿಗದಿತ ಸ್ಥಳಗಳಿರುತ್ತವೆ. ಮುಂಬರುವ ದಿನಗಳಲ್ಲಿ ‘ಸ್ಟಾಪ್’ ವ್ಯವಸ್ಥೆ ಜಾರಿಯಾಗಲಿದೆ. ಬಸ್ಗಳು ಎಲ್ಲಿವೆ ಎಂಬುದನ್ನು ರೈಲ್ವೆ ಆ್ಯಪ್ನಲ್ಲಿರುವ ವ್ಯವಸ್ಥೆಯಂತೆ ತಿಳಿದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನ ಮುಂದೆ ಬಸ್ ನಿಲ್ಲಿಸುವ ವ್ಯವಸ್ಥೆ ಮಾಡಲಾಗುವುದು.”
— ಮಂಜುನಾಥ್, ಕೆಎಸ್ಆರ್ಟಿಸಿ ಜಿಲ್ಲಾ ನಿಯಂತ್ರಕ, ತುಮಕೂರು
ಡೈಪರ್ಸ್ ಹಾಗೂ ಸ್ಯಾನಿಟರಿ ಪ್ಯಾಡ್ಗಳನ್ನು ಎಲ್ಲೆಂದರಲ್ಲಿ ಹಾಕದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಇವು ಪ್ರಕೃತಿಯಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಸರಿಯಾದ ವಿಲೇವಾರಿ ವ್ಯವಸ್ಥೆ ಕಲ್ಪಿಸಲು ಪುರಸಭೆಯೊಂದಿಗೆ ವಿದ್ಯಾರ್ಥಿಗಳು ಸಹಕರಿಸಬೇಕು.
— ಉಮೇಶ್, ಪುರಸಭೆ ಮುಖ್ಯಾಧಿಕಾರಿ, ಕೊರಟಗೆರೆ
– ಶ್ರೀನಿವಾಸ್ ಕೊರಟಗೆರೆ.
