ಬೆಂಗಳೂರು: ಇಂದಿನ ಸಮಾಜದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಡಂಬರದಿಂದ ನಡೆಸುವ ಮದುವೆಗಳು ಹೆಚ್ಚಾಗುತ್ತಿದ್ದರೂ, ಅಂತಹ ದಾಂಪತ್ಯ ಜೀವನಗಳು ಶಾಶ್ವತವಾಗಿ ಉಳಿಯುತ್ತಿಲ್ಲ ಎಂದು ಹಿರಿಯ ಸಾಹಿತಿ ಹಾಗೂ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ವಿಷಾದ ವ್ಯಕ್ತಪಡಿಸಿದರು.

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ಗ್ರಾಮದ ಮುಕ್ಕಣ್ಣೇಶ್ವರ ವಿವಾಹ ಮಂಟಪದಲ್ಲಿ ಆಯೋಜಿಸಿದ್ದ ಕುವೆಂಪು ಮಂತ್ರ ಮಾಂಗಲ್ಯ ಸಾಹಿತ್ಯ ಪ್ರಚಾರ ಹಾಗೂ ಕವಯಿತ್ರಿ ಕೆ.ಟಿ. ಲತ ಅವರ “ನಿನ್ನೇಕೆ ಆಯ್ದುಕೊಂಡೆ” ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಯಿತ್ರಿ ಕೆ.ಟಿ. ಲತ ಹಾಗೂ ಬಿಎಂಟಿಸಿ ನಿರ್ವಾಹಕರಾದ ಸಿ.ಹೆಚ್. ಭರತ್ ಕುಮಾರ್ ಅವರ ಸರಳ ವಿವಾಹವನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಸಾಹಿತ್ಯದ ಆಶಯದಂತೆ ನೆರವೇರಿಸಲಾಯಿತು. ಇದೇ ವೇಳೆ ವಧುವರರಿಗೆ ಮಂತ್ರ ಮಾಂಗಲ್ಯ ಬೋಧಿಸಿದ ಡಾ. ಬೈರಮಂಗಲ ರಾಮೇಗೌಡ, ಯುವಜನರು ಹಾಗೂ ಪೋಷಕರಲ್ಲಿ ಸರಳ ವಿವಾಹದ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ವೈಯಕ್ತಿಕ ಅಭಿಲಾಷೆ, ಶ್ರೀಮಂತಿಕೆ ಹಾಗೂ ಸಾಮಾಜಿಕ ಪ್ರತಿಷ್ಠೆ ಪ್ರದರ್ಶಿಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಕುವೆಂಪು ಅವರ ಆಶಯದಂತೆ ನಡೆಯುವ ಸರಳ ವಿವಾಹಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಸಮಾಜದಿಂದ ವರದಕ್ಷಿಣೆ, ಮೌಢ್ಯ ಹಾಗೂ ಅನಗತ್ಯ ಆಡಂಬರವನ್ನು ದೂರ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕೆ.ಟಿ. ಲತ ಅವರ “ನಿನ್ನೇಕೆ ಆಯ್ದುಕೊಂಡೆ” ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಪ್ರಗತಿಪರ ಲೇಖಕಿ ಹಾಗೂ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಇಂದಿರಾ ಕೃಷ್ಣಪ್ಪ, ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಂಡು ಜನರಲ್ಲಿ ಅರಿವು, ವಿಶ್ವಾಸ ಮತ್ತು ನಂಬಿಕೆ ಮೂಡಿಸುವ ಇಂತಹ ಸರಳ ವಿವಾಹಗಳು ಅತ್ಯವಶ್ಯಕ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧ, ಸಂಸ್ಕೃತಿ ಮತ್ತು ಸಂಸ್ಕಾರಯುತವಾಗಿ ನಡೆಯುತ್ತಿದ್ದ ವಿವಾಹಗಳು ದೀರ್ಘಕಾಲದ ಸುಖೀ ಸಂಸಾರಕ್ಕೆ ಕಾರಣವಾಗುತ್ತಿದ್ದವು. ಅಂತಹ ಮೌಲ್ಯಾಧಾರಿತ ಸಂಪ್ರದಾಯಗಳು ಮತ್ತೆ ಸಮಾಜದಲ್ಲಿ ನೆಲೆಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾವಂತರಾದ ಶಿಕ್ಷಕಿ ಹಾಗೂ ನಿರೂಪಕಿ ಕೆ.ಟಿ. ಲತ ಮತ್ತು ಬಿಎಂಟಿಸಿ ನಿರ್ವಾಹಕರಾದ ಸಿ.ಹೆಚ್. ಭರತ್ ಕುಮಾರ್ ಅವರು ಯಾವುದೇ ಆಡಂಬರವಿಲ್ಲದೆ, ತಂದೆ-ತಾಯಿ ಹಾಗೂ ಕುಟುಂಬದವರನ್ನು ಒಪ್ಪಿಸಿ ಸರಳವಾಗಿ ವಿವಾಹವಾಗಿರುವುದು ಸಂತಸದ ವಿಚಾರ ಎಂದರು. ಲತ ಅವರ “ನಿನ್ನೇಕೆ ಆಯ್ದುಕೊಂಡೆ” ಕವನ ಸಂಕಲನವು ಮನುಷ್ಯ ಬದುಕಿನ ಹಲವು ಭಾವನೆಗಳನ್ನು ಅನಾವರಣಗೊಳಿಸುವ ಉತ್ತಮ ಕೃತಿಯಾಗಿದ್ದು, ಉತ್ತಮ ವಿಚಾರಗಳನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಪ್ರಾಸ್ತಾವಿಕವಾಗಿ ಮಾತನಾಡಿದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ಪ್ರೊ. ಪಿ. ಗೋವಿಂದರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ಇಂದಿರಾ ಕೃಷ್ಣಪ್ಪ, ಪ್ರೊ. ಪಿ. ಗೋವಿಂದರಾಜು, ಟ್ರಸ್ಟ್ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ), ರಂಗಭೂಮಿ ಕಲಾವಿದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಹಾಗೂ ವಾಗ್ಮಿ ಡಾ. ಶಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಾಗ್ಮಿ ಡಾ. ಶಾಂತರಾಜು ಕಾರ್ಯಕ್ರಮ ನಿರೂಪಿಸಿದರು. ರಂಗಭೂಮಿ ಕಲಾವಿದ, ಕವಿ ಹಾಗೂ ಪೊಲೀಸ್ ಇಲಾಖೆಯ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಕುವೆಂಪು ಗೀತೆಗಳನ್ನು ಹಾಡಿದರು. ಹಿರಿಯರು, ಸಾಹಿತಿಗಳು, ಕಲಾವಿದರು ಹಾಗೂ ವಧುವರರ ಕುಟುಂಬದವರು ಅಕ್ಷತೆ ಹಾಕಿ ಶುಭ ಹಾರೈಸಿದರು. ಸರಳವಾದ ಊಟೋಪಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಮೆಚ್ಚುಗೆಗೆ ಪಾತ್ರವಾಯಿತು.
