ಕೆ.ಆರ್.ಪೇಟೆ: ಬಲ್ಲೇನಹಳ್ಳಿ ಸರ್ಕಾರಿ ಶಾಲೆಗಳಿಗೆ ದಾನಿ ಬಿ.ಎಸ್. ರಾಮು ಅಳಿಲು ಸೇವೆ ಶ್ಲಾಘನೀಯ
ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುಧಾಕರ್ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪಿ.ಎನ್. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಗ್ರಾಮದ ಇಂಜಿನಿಯರ್, ಪ್ರಥಮ ದರ್ಜೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರಾದ ಬಿ.ಎಸ್. ರಾಮು ಅವರು ಕಳೆದ ಐದು ವರ್ಷಗಳಿಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರವಾಗಿ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಪಾವತಿಸುವ ಮೂಲಕ ಶಾಲೆ ಮತ್ತು ಕಾಲೇಜಿನ ದಾಖಲಾತಿ ಹೆಚ್ಚಳಕ್ಕೆ ಕಾರಣರಾಗಿರುವ ರಾಮು, ಪಿಯು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ಬುಕ್ಗಳನ್ನು ವಿತರಿಸುತ್ತಿದ್ದಾರೆ. ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣೆಗೂ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಟಾಪರ್ಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕರಿಗೆ ಸನ್ಮಾನ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ರಾಮು, ಬಲ್ಲೇನಹಳ್ಳಿ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳ ಮಕ್ಕಳಿಗೂ ಉಚಿತವಾಗಿ ಸ್ಕೂಲ್ ಬ್ಯಾಗ್ಗಳನ್ನು ವಿತರಿಸಿದ್ದಾರೆ ಎಂದು ಶಿವಣ್ಣ ಹೇಳಿದರು.
“ಇಂತಹ ಉದಾರ ಗುಣ ಹೊಂದಿರುವ ಬಿ.ಎಸ್. ರಾಮು ಅವರು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಎಂಬುದು ನಮಗೆ ಹೆಮ್ಮೆಯ ಸಂಗತಿ. ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ” ಎಂದು ಶಿವಣ್ಣ ಹಾರೈಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ದಾನವಾಗಿ ನೀಡಿದ ಬಿ.ಎಸ್. ರಾಮು ಅವರನ್ನು ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಬಿ.ಎಸ್. ರಾಮು, “ನನಗೆ ವಿದ್ಯೆ ಕಲಿಸಿದ ಶಾಲೆಗೆ ನನ್ನದು ಅಳಿಲು ಸೇವೆ. ಮುಂದೆಯೂ ನಮ್ಮೂರಿನ ಶಾಲೆ ಮತ್ತು ಕಾಲೇಜುಗಳ ಅಭಿವೃದ್ಧಿಗೆ ಇದೇ ರೀತಿಯ ಸೇವೆಯನ್ನು ಮುಂದುವರಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಜಿ. ರಾಜೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗೀತಾ ನಾಗರಾಜು, ಎಸ್ಡಿಎಂಸಿ ಅಧ್ಯಕ್ಷ ಸುಧಾಕರ್, ಮುಖಂಡರಾದ ಮೆಡಿಕಲ್ ಅಶೋಕ್, ಸಿದ್ದಪ್ಪನವರ ಪುಟ್ಟಣ್ಣ, ಪಾಪೇಗೌಡ, ಪುಟ್ಟರಾಜು, ಭವ್ಯ, ಅನ್ನಪೂರ್ಣ, ಜ್ಯೋತಿ, ಉಪನ್ಯಾಸಕರಾದ ಬೃಂದಾ, ವೀಣಾ, ಹಿರಿಯ ಶಿಕ್ಷಕರಾದ ಬಿ. ಬಸಪ್ಪ, ಮಮತ, ಅರುಣ್ ಕುಮಾರ್, ನಟರಾಜು, ಹೆಚ್.ಬಿ. ಮಲ್ಲಿಕಾರ್ಜುನ್, ರವಿ ಸೇರಿದಂತೆ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.
