ಕೆ.ಆರ್.ಪೇಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂರು ವಿದ್ಯಾರ್ಥಿಗಳಿಗೆ ವಿಧಾನ ಸಭೆಯಲ್ಲಿ ನಡೆಯುತ್ತಿರುವ ಅಧಿವೇಶನ ಕಲಾಪ ವೀಕ್ಷಣೆ ಮಾಡಲು ಕೆ ಆರ್ ಪೇಟೆ ಕ್ಷೇತ್ರದ ಜನಪ್ರಿಯ ಶಾಸಕ ಹೆಚ್ ಟಿ ಮಂಜು ಅವಕಾಶ ಮಾಡಿಕೊಟ್ಟ ಅಂಗವಾಗಿ ಕಾಲೇಜು ಆಡಳಿತ ಮಂಡಳಿಯ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದ ಕಲಾಪವನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 100 ವಿದ್ಯಾರ್ಥಿಗಳಿಗೆ ಶಾಸಕರ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ಹೋಗಲು ಬಸ್ ವ್ಯವಸ್ಥೆ ಜೊತೆಗೆ ತಿಂಡಿ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟ ಕ್ಷೇತ್ರದ ಶಾಸಕರಾದ ಹೆಚ್.ಟಿ. ಮಂಜು ಅವರಿಗೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.
ಪ್ರಾಂಶುಪಾಲರಾದ ಪ್ರೊಫೆಸರ್ ಜಗದೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಕಾರ್ಯವೈಖರಿ, ವಿಧಾನಸಭೆಯ ಕಲಾಪ, ಶಾಸಕರ ಜವಾಬ್ದಾರಿ ಹಾಗೂ ಜನಪ್ರತಿನಿಧಿಗಳ ಕರ್ತವ್ಯಗಳ ಕುರಿತು ನೇರ ಅನುಭವ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಈ ಅವಕಾಶ ಕಲ್ಪಿಸಿರುವುದು ಶ್ಲಾಘನೀಯವಾಗಿದೆ. ಪಠ್ಯಪುಸ್ತಕಗಳಲ್ಲಿ ಓದುವ ಸಂಸದೀಯ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಕಣ್ಣಾರೆ ವೀಕ್ಷಿಸುವ ಅವಕಾಶ ವಿದ್ಯಾರ್ಥಿಗಳಿಗೆ ದೊರೆತಿರುವುದು ಅವರ ಜ್ಞಾನವನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗಿದೆ.

ವಿಧಾನಸಭೆಯ ಅಧಿವೇಶನದಲ್ಲಿ ಜನರ ಸಮಸ್ಯೆಗಳು, ಅಭಿವೃದ್ಧಿ ವಿಚಾರಗಳು ಹಾಗೂ ವಿವಿಧ ಸಾರ್ವಜನಿಕ ವಿಷಯಗಳ ಕುರಿತು ನಡೆಯುವ ಚರ್ಚೆಗಳನ್ನು ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಪ್ರೇರಣೆ ಪಡೆಯಲು ಒಂದು ಉತ್ತಮ ಅವಕಾಶವಾಗುತ್ತದೆ. ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಜಕೀಯ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ನಡೆಯಬೇಕೆಂದು ಪ್ರಾಂಶುಪಾಲರು ಅಭಿಪ್ರಾಯಪಟ್ಟರು.
ಇಂತಹ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟ ಶಾಸಕ ಹೆಚ್.ಟಿ. ಮಂಜು ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ನೀಡುತ್ತಿರುವ ಸಹಕಾರವನ್ನು ವಿದ್ಯಾರ್ಥಿಗಳು ಶ್ಲಾಘಿಸಿದರು.
– ಶ್ರೀನಿವಾಸ್ ಆರ್.
