ಬೆಂಗಳೂರು: ಮೊಬಿಲಿಟಿ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ ಅರೈವ್ ಬೆಂಗಳೂರಿನಲ್ಲಿ ತನ್ನ ನೂತನ ಇನ್ನೋವೇಶನ್ ಹಬ್ ಅನ್ನು ಆರಂಭಿಸಿದೆ. ಈ ಹೊಸ ಕೇಂದ್ರದ ಮೂಲಕ ಸಂಸ್ಥೆಯು ತನ್ನ ಜಾಗತಿಕ ತಾಂತ್ರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆ ಇಟ್ಟಿದೆ.
ಪ್ರಿಡಿಕ್ಟಿವ್ ಎಐ ಸಾಮರ್ಥ್ಯಗಳನ್ನು ವೃದ್ಧಿಸುವ ಹಾಗೂ ನಗರಗಳಲ್ಲಿ ಜನರ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಈ ಕೇಂದ್ರವು ವಿಶ್ವದರ್ಜೆಯ ಎಂಜಿನಿಯರಿಂಗ್ ಪ್ರತಿಭೆಗಳನ್ನು ಒಂದೆಡೆ ಸೇರಿಸಲಿದೆ. ಬೆಂಗಳೂರನ್ನು ಅರೈವ್ನ ಪ್ರಮುಖ ತಾಂತ್ರಿಕ ಕೇಂದ್ರವನ್ನಾಗಿ ರೂಪಿಸುವ ಕಾರ್ಯತಂತ್ರದ ಭಾಗವಾಗಿ, ಎಂಜಿನಿಯರಿಂಗ್, ಉತ್ಪನ್ನ ಅಭಿವೃದ್ಧಿ, ಗ್ರಾಹಕ ಸೇವೆ, ಮಾರಾಟ ಕಾರ್ಯಾಚರಣೆ ಮತ್ತು ಎಐ ಸೇರಿದಂತೆ ವಿವಿಧ ವಿಭಾಗಗಳ ತಂಡಗಳನ್ನು ಇಲ್ಲಿ ಒಟ್ಟುಗೂಡಿಸಲಾಗುತ್ತಿದೆ.
ನಗರ ಸಂಚಾರವನ್ನು ಸರಳಗೊಳಿಸುವ ಸಂಸ್ಥೆಯ ಜಾಗತಿಕ ಉತ್ಪನ್ನಗಳ ಅಭಿವೃದ್ಧಿಗೆ ವೇಗ ನೀಡುವುದು ಹಾಗೂ ಗ್ರಾಹಕ-ಕೇಂದ್ರಿತ ಮೌಲ್ಯವನ್ನು ಸೃಷ್ಟಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಭಾರತದ ಪ್ರಮುಖ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ತನ್ನ ನೂತನ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅರೈವ್ ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದ್ದು, ದೇಶದ ಅತ್ಯುತ್ತಮ ತಾಂತ್ರಿಕ ಪ್ರತಿಭೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಜಾಗತಿಕ ಎಂಜಿನಿಯರಿಂಗ್ ಕಾರ್ಯಚಟುವಟಿಕೆಗಳಿಗೆ ವೇಗ ನೀಡುವುದರ ಜೊತೆಗೆ, ವಿಶ್ವದಾದ್ಯಂತ ಸಂಚಾರವನ್ನು ಸರಳಗೊಳಿಸುವ ಪ್ರಿಡಿಕ್ಟಿವ್ ಎಐ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರಿನ ತಂಡವು ನಿರ್ಣಾಯಕ ಪಾತ್ರ ವಹಿಸಲಿದೆ.
ಈ ಕುರಿತು ಅರೈವ್ನ ಸಿಇಒ ಕ್ಯಾಮರಾನ್ ಕ್ಲೇಟನ್ ಮಾತನಾಡಿ, “ಪ್ರಪಂಚದಾದ್ಯಂತ ಚುರುಕಾದ ನಗರ ಸಂಚಾರಕ್ಕೆ ಬೆಂಬಲ ನೀಡುವ ತಂತ್ರಜ್ಞಾನ ಮತ್ತು ಉತ್ಪನ್ನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ನಮ್ಮ ಪಯಣದಲ್ಲಿ ಬೆಂಗಳೂರಿಗೆ ಆಗಮಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಈ ಕ್ಷಣವನ್ನು ವಿಶೇಷವಾಗಿಸುವುದು ಇಲ್ಲಿನ ಪ್ರತಿಭೆ ಮತ್ತು ಆಕಾಂಕ್ಷೆ. ಬೆಂಗಳೂರು ಅತ್ಯುತ್ತಮ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಇಲ್ಲಿನ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡುವುದರಿಂದ ಸಂಕೀರ್ಣ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಗರಗಳು ಮತ್ತು ಸಮುದಾಯಗಳ ಪ್ರಯಾಣವನ್ನು ಇನ್ನಷ್ಟು ಸರಳಗೊಳಿಸುವ ಅನುಭವಗಳನ್ನು ರೂಪಿಸಲು ಸಾಧ್ಯವಾಗಲಿದೆ” ಎಂದು ಹೇಳಿದರು.
ಅರೈವ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜೆರೋಮ್ ಸೆಲ್ವಾ ಮಾತನಾಡಿ, “ನಮ್ಮ ಬೆಂಗಳೂರು ಇನ್ನೋವೇಶನ್ ಹಬ್ ಅನ್ನು ಆರಂಭಿಸುವ ಉದ್ದೇಶ, ಪ್ರತಿಭಾವಂತರು ಒಟ್ಟಾಗಿ ಸೇರಿ ಹೊಸತನವನ್ನು ಸೃಷ್ಟಿಸಲು ಮತ್ತು ಬೆಳೆಯಲು ಕ್ರಿಯಾಶೀಲ ವೇದಿಕೆಯನ್ನು ಕಲ್ಪಿಸುವುದಾಗಿದೆ. ಸಂಚಾರವು ಪ್ರತಿಯೊಂದು ಸಮುದಾಯದ ಮೂಲಭೂತ ಅಂಶವಾಗಿದೆ. ನಿಜವಾದ ಜಾಗತಿಕ ಸಂಸ್ಥೆಯು ವೈವಿಧ್ಯಮಯ ಸಂಸ್ಕೃತಿಗಳ ಸಮೃದ್ಧಿಯ ಮೇಲೆ ನಿರ್ಮಾಣವಾಗುತ್ತದೆ. ಇದೇ ಹಂಚಿಕೆಯ ಶಕ್ತಿಯು ನಗರಗಳನ್ನು ಇನ್ನಷ್ಟು ವಾಸಯೋಗ್ಯವಾಗಿಸುವ ನಮ್ಮ ಉದ್ದೇಶದತ್ತ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ನೆರವಾಗುತ್ತದೆ” ಎಂದು ತಿಳಿಸಿದರು.
ತಾಂತ್ರಿಕ ಸಾಮರ್ಥ್ಯವನ್ನು ವಿಸ್ತರಿಸುವುದರ ಜೊತೆಗೆ, ಈ ಹೊಸ ಕೇಂದ್ರವು ಜಾಗತಿಕ ಸಿಬ್ಬಂದಿಯೊಂದಿಗೆ ಸಹಯೋಗದ ಸಂಸ್ಕೃತಿಯನ್ನು ಬೆಳೆಸುವ ಅರೈವ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರಿನ ಹೃದಯಭಾಗದಲ್ಲಿ ಸುಮಾರು 20,000 ಚದರ ಅಡಿ ವಿಸ್ತೀರ್ಣದ ನೂತನ ಕಚೇರಿಯನ್ನು ಸಂಸ್ಥೆ ಹೊಂದಿದ್ದು, ಅರೈವ್ನ ಕಾರ್ಯನಿರ್ವಾಹಕ ನಾಯಕತ್ವ ತಂಡ ಮತ್ತು ಇತರ ಹಿರಿಯ ನಾಯಕರು ಜಂಟಿಯಾಗಿ ಇದನ್ನು ಉದ್ಘಾಟಿಸಿದರು.
ಬೆಳವಣಿಗೆಗೆ ಪೂರಕವಾಗಿ ರೂಪಿಸಿರುವ ಬೆಂಗಳೂರಿನ ಈ ಕಚೇರಿಯು ಸ್ವೀಡನ್ನ ಸ್ಟಾಕ್ಹೋಮ್, ಬ್ರಿಟನ್ನ ಲಂಡನ್, ಅಮೆರಿಕದ ಅಟ್ಲಾಂಟಾ ಸೇರಿದಂತೆ ಜಗತ್ತಿನಾದ್ಯಂತ ಇರುವ ಅರೈವ್ನ ಕಚೇರಿಗಳ ಜಾಲವನ್ನು ಮತ್ತಷ್ಟು ಬಲಪಡಿಸಲಿದೆ. ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆಯಾದ ಜಿನ್ನೋವ್ ಸಹಭಾಗಿತ್ವದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಭಾರತದಲ್ಲಿ ಅರೈವ್ ತನ್ನ ಕಾರ್ಯಾಚರಣೆಯನ್ನು ನಿರ್ಮಿಸಲು ಮತ್ತು ವಿಸ್ತರಿಸಲು ಸಂಸ್ಥೆಯು ಬೆಂಬಲ ನೀಡಿದೆ.
ಅರೈವ್ ಕುರಿತು
ಅರೈವ್ ಸಂಸ್ಥೆಯು ನಗರಗಳಲ್ಲಿ ಸಂಚಾರವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ಮೊಬಿಲಿಟಿ ಕ್ಷೇತ್ರದ ಜಾಗತಿಕ ಸಂಸ್ಥೆಯಾಗಿದೆ. ಈಸಿಪಾರ್ಕ್, ಫ್ಲೋಬರ್ಡ್, ರಿಂಗ್ಗೋ, ಪಾರ್ಕ್ಮೊಬೈಲ್ ಮತ್ತು ಪಾರ್ಕೋಪೀಡಿಯಾ ಸೇರಿದಂತೆ ತನ್ನ ವಿವಿಧ ಬ್ರ್ಯಾಂಡ್ಗಳ ಮೂಲಕ ಸಂಸ್ಥೆಯು 90 ದೇಶಗಳ 20,000ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ವಾಯತ್ತ ವಾಹನ ನಿರ್ವಹಣಾ ಪರಿಹಾರಗಳು, ಸ್ಮಾರ್ಟ್ ಪಾವತಿ ವ್ಯವಸ್ಥೆಗಳು, ಪಾರ್ಕಿಂಗ್ ವ್ಯವಸ್ಥೆಯ ಸುಧಾರಣೆ, ದತ್ತಾಂಶ ಆಧಾರಿತ ಸಂಚಾರ ದಟ್ಟಣೆ ನಿರ್ವಹಣೆ ಹಾಗೂ ಸಾರ್ವಜನಿಕ ಸಾರಿಗೆ ಜಾಲಗಳ ಅಭಿವೃದ್ಧಿಯ ಮೂಲಕ ನಗರಗಳನ್ನು ಇನ್ನಷ್ಟು ವಾಸಯೋಗ್ಯವಾಗಿಸಲು ಅರೈವ್ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಅರೈವ್ ಅಧಿಕೃತ ವೆಬ್ಸೈಟ್� ಗೆ ಭೇಟಿ ನೀಡಬಹುದು. arrive.com
