ಕೆ.ಆರ್.ಪೇಟೆ: ನಾಡಿನ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಶಾಸಕ ಬಿ. ಪ್ರಕಾಶ್ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಶ್ರೀ ಮಾಸ್ತಮ್ಮ, ಶ್ರೀ ಹುಚ್ಚಮ್ಮ ಹಾಗೂ ಶ್ರೀ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕಿಕ್ಕೇರಿ ತಾಲ್ಲೂಕಿನ ಹರಿಹರಪುರ ವಲಯದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿಯೇ ಬ್ಯಾಂಕ್ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಿ, ಅತಿ ಕಡಿಮೆ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಒಂದಾಗಿದೆ. ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು, ಹೈನುಗಾರಿಕೆ ನಡೆಸಲು ಹಾಗೂ ಕೃಷಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆ ಹಲವು ಯೋಜನೆಗಳು ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಒ. ಮಲ್ಲಿಕಾರ್ಜುನ್, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ದೇಶದಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.
ಈ ಸಂಸ್ಥೆಯು ಕೇವಲ ಧಾರ್ಮಿಕ ಸಂಸ್ಥೆಯಾಗಿ ಉಳಿಯದೆ ಸಾಮಾಜಿಕ ಕ್ರಾಂತಿಯನ್ನೇ ರೂಪಿಸಿದೆ. ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ನೀಡಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ. ಮಹಿಳೆಯರು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು ಹೈನುಗಾರಿಕೆ, ಸಣ್ಣ ವ್ಯಾಪಾರ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪ್ರಗತಿ ನಿಧಿ, ಕೃಷಿ ನಿಧಿ, ವಸತಿ ಯೋಜನೆ, ವಿದ್ಯಾರ್ಥಿ ವೇತನ, ಜನಜಾಗೃತಿ ಕಾರ್ಯಕ್ರಮಗಳು, ವ್ಯಸನಮುಕ್ತ ಶಿಬಿರಗಳು, ಪರಿಸರ ಹಾಗೂ ಹಸಿರು ಕಾರ್ಯಕ್ರಮಗಳು, ಆರೋಗ್ಯ ಶಿಬಿರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಧರ್ಮಸ್ಥಳ ಸಂಸ್ಥೆ ಜಾರಿಗೆ ತಂದಿದೆ. ಇದು ಕೇವಲ ಸಾಲ ನೀಡುವ ಸಂಸ್ಥೆಯಲ್ಲ, ಸಮಾಜಕ್ಕೆ ಸಂಸ್ಕಾರ ಮತ್ತು ಸ್ವಾವಲಂಬನೆಯ ಬದುಕಿನ ಮಾರ್ಗ ತೋರಿಸುವ ಸಂಸ್ಥೆಯಾಗಿದೆ ಎಂದು ಬಣ್ಣಿಸಿದರು.
ಹರಿಹರಪುರ ವಲಯದ ಮೇಲ್ವಿಚಾರಕಿ ಸಂಗೀತ ದಿನೇಶ್ ಹಾಗೂ ಸೇವಾ ಪ್ರತಿನಿಧಿಗಳ ನೇತೃತ್ವದಲ್ಲಿ ದೇವಸ್ಥಾನವನ್ನು ಹೂವು ಮತ್ತು ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಮಹಿಳೆಯರು ಮುತ್ತೈದೆಯರಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ, ಕಳಸ ಸ್ಥಾಪಿಸಿ ಶ್ರೀ ವರಮಹಾಲಕ್ಷ್ಮಿ ದೇವಿಗೆ ಅರಿಶಿನ, ಕುಂಕುಮ, ಬಳೆ ಹಾಗೂ ಹೂವುಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಸಂಘದ ಚನ್ನರಾಯಪಟ್ಟಣ ಜಿಲ್ಲಾ ನಿರ್ದೇಶಕಿ ಲೀಲಾವತಿ, ಕಿಕ್ಕೇರಿ ಯೋಜನಾಧಿಕಾರಿ ಶ್ರೀನಿವಾಸ್, ಪುರೋಹಿತ ಪುನೀತ್, ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಲತಾ, ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ, ಜನಜಾಗೃತಿ ಜಿಲ್ಲಾ ನಿರ್ದೇಶಕ ಡಿ.ಸಿ. ಕುಮಾರ್, ಹರಿಹರಪುರ ವಲಯದ ಮೇಲ್ವಿಚಾರಕಿ ಸಂಗೀತ ದಿನೇಶ್, ಸೇವಾ ಪ್ರತಿನಿಧಿಗಳಾದ ಮಂಜುಳ, ಶೃತಿ, ಪೂರ್ಣಿಮಾ, ಗೀತಾ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ: ಮನು ಮಾಕವಳ್ಳಿ, ಕೆ.ಆರ್.ಪೇಟೆ
